ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತನಾಗ್ ಜಿಲ್ಲೆಯಲ್ಲಿ ಇಂದು ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು (Soldiers) ಹುತಾತ್ಮರಾಗಿದ್ದಾರೆ. ಓರ್ವ ಯೋಧ ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ ಅನಂತ್‌ನಾಗ್ ಜಿಲ್ಲೆಯ ಅಹ್ಲಾನ್ ಗಡೋಲ್‌ನಲ್ಲಿ ಎನ್‌ಕೌಂಟರ್ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಕರ್ನಾಗ್ ಉಪವಿಭಾಗದ ಅರಣ್ಯದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಭಯೋತ್ಪಾದಕರು ಸೇನೆಯ ಗಸ್ತು ತಿರುಗುವಿಕೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್ ಇನ್‌ಸ್ಪೆಕ್ಟರ್ ಅಮಾನತು
ವಿದೇಶಿಯರು ಎಂದು ಶಂಕಿಸಲಾದ ಭಯೋತ್ಪಾದರನ್ನು ಮಟ್ಟಹಾಕಲು ಸೇನೆಯ ವಿಶೇಷ ಪಡೆಗಳು, ಪ್ಯಾರಾಟ್ರೂಪರ್‌ಗಳು ಕಾರ್ಯಾಚರಣೆಯಲ್ಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕೋಕರ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್ ಬಿಟ್ಟರೆ, ಇದು ಎರಡನೇ ಪ್ರಮುಖ ಗುಂಡಿನ ಚಕಮಕಿಯಾಗಿದೆ.
ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಅವರಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ. ಇದನ್ನೂ ಓದಿ: ಈ ಗ್ರಾಮದಲ್ಲಿ ಧೂಮಪಾನ ಮಾಡುವಂತಿಲ್ಲ, ಅರ್ಧಂಬರ್ಧ ಬಟ್ಟೆ ಧರಿಸುವಂತಿಲ್ಲ – ಯಾಕೆ ಗೊತ್ತಾ?
ಸೆಪ್ಟೆಂಬರ್ 2023 ರಲ್ಲಿ, ಕೋಕರ್ನಾಗ್ ಅರಣ್ಯದಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಕಮಾಂಡಿಂಗ್ ಆಫೀಸರ್, ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುತಾತ್ಮರಾಗಿದ್ದರು.