ದುಬೈನ ಅಲ್ ಮುಕ್ತೌಮ್ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿದ್ದ ʻದುಬೈ ಅಂತಾರಾಷ್ಟ್ರೀಯ ಏರ್ ಶೋʼನಲ್ಲಿ (Dubai Air Show) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ ಪತನಗೊಂಡಿದೆ. ಈ ಬೆನ್ನಲ್ಲೇ ತೇಜಸ್ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ, ಸೋಷಿಯಲ್ ಮೀಡಿಯಾದಲ್ಲೂ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
आज एक दर्दनाक क्षण हमारे बहादुर पायलट की शहादत के साथ हमारे सामने आया, जब दुबई एयर शो के दौरान हमारी अपनी तकनीक, हमारी उड़ान संभावना, यानी #Tejas विमान जो देश की शक्ति व समर्पण का प्रतीक है जो #DubaiAirShow में इस प्रकार धराशाही हो गया जैसे ये हकीकत नहीं किसी फ़िल्म का scene… pic.twitter.com/4OfCDYAjHA
— Abhishek Kumar Jatav ( बहुजन शायर ) (@abhijatav07) November 21, 2025
2001ರಲ್ಲಿ ತೇಜಸ್ ಫೈಟರ್ ಜೆಟ್‍ನ (Tejas Fighter Jet) ಮೊದಲ ಪರೀಕ್ಷಾ ಹಾರಾಟದ ನಂತರ, 2016 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. 2024ರ ಮಾರ್ಚ್ 12ರಂದು ಜೈಸಲ್ಮೇರ್‌ನ ವಿದ್ಯಾರ್ಥಿನಿಯರ ಹಾಸ್ಟೆಲ್ ಮೈದಾನದಲ್ಲಿ ತರಬೇತಿಯ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನ ಫಸ್ಟ್ ಟೈಮ್ ಅಪಘಾತಕ್ಕೀಡಾಯಿತು (Tejas Crash). ಆದ್ರೆ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದರು. ಕಳೆದ 24 ವರ್ಷಗಳ ಇತಿಹಾಸದಲ್ಲಿ ಇದು 2ನೇ ಅಪಘಾತವಾಗಿದ್ದು, ಪೈಲಟ್ ಸಾವನ್ನಪ್ಪಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ತಜ್ಞರು ತೇಜಸ್ ಯುದ್ಧ ವಿಮಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಭಾರತೀಯ ವಾಯುಪಡೆಗೆ ಒಟ್ಟು 180 ಯುದ್ಧ ವಿಮಾನಗಳ ಸೇರ್ಪಡೆಗೆ ತಯಾರಿ ನಡೆಯುತ್ತಿದ್ದು, ಲಘು ಯುದ್ಧವಿಮಾನದ ವೆಚ್ಚವನ್ನು ಅಂದಾಜಿಸಿದ್ದಾರೆ.

ಹಾಗಿದ್ರೆ ಈ ತೇಜಸ್ ಯುದ್ಧ ವಿಮಾನದ ವಿಶೇಷತೆ ಏನು? ಒಂದು ವಿಮಾನಕ್ಕೆ ತಗುಲುವ ವೆಚ್ಚ ಎಷ್ಟಾಗಬಹುದು? ರಕ್ಷಣಾ ಸಚಿವಾಲಯ ಮಾಡಿಕೊಂಡಿರುವ ಒಪ್ಪಂದ ಏನು ಅನ್ನೋದ್ರ ಬಗ್ಗೆ ತಿಳಿಯೋಣ..
97 ಯುದ್ಧ ವಿಮಾನ ಖರೀದಿಗೆ ಇತ್ತೀಚೆಗಷ್ಟೇ ಡೀಲ್
ಹೌದು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಸ್ವದೇಶಿ ರಕ್ಷಣಾ ಸಾಮಗ್ರಿಗಳ ಬಳಕೆಗೆ ಹೆಚ್ಚು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆಗೆ 97 ಸುಧಾರಿತ ತೇಜಸ್ ಎಂಕೆ-1ಎ ಲಘು ಯುದ್ಧ ವಿಮಾನಗಳ (LAA) ಖರೀದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿತು. 62,370 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದ ಇದಾಗಿದೆ. ಈ ಒಪ್ಪಂದವು ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಗೆ ದೊಡ್ಡ ಉತ್ತೇಜನ ನೀಡಿತು. ಇದರ ಅಡಿಯಲ್ಲಿ 68 ಏಕ ಆಸನದ (ಸಿಂಗಲ್-ಸೀಟ್) ಫೈಟರ್ ಜೆಟ್‌ಗಳು ಮತ್ತು 29 ಎರಡು ಆಸನದ (ಟ್ವಿನ್ ಸೀಟರ್) ತರಬೇತಿ ಜೆಟ್‌ಗಳನ್ನ ವಾಯುಪಡೆಗೆ ಸೇರಲಿವೆ.

ಇದಕ್ಕೂ ಮುನ್ನ ಕೇಂದ್ರವು 48,000 ಕೋಟಿ ರೂ.ಗಳಲ್ಲಿ 48 ತೇಜಸ್ ಮಾರ್ಕ್-1ಎ ಜೆಟ್‌ಗಳ ಖರೀದಿಗೆ ಅನುಮೋದನೆ ನೀಡಿತ್ತು. ಒಟ್ಟಾರೆಯಾಗಿ, IAF ನೌಕಾಪಡೆಯು ಶೀಘ್ರದಲ್ಲೇ 180 ತೇಜಸ್ ಮಾರ್ಕ್-1ಎ ವಿಮಾನಗಳನ್ನ ಒಳಗೊಂಡ 10 ಸ್ಕ್ವಾಡ್ರನ್ ರಚನೆಗೆ ತಯಾರಿ ನಡೆಸಿದೆ.
ಒಪ್ಪಂದಕ್ಕೆ ಕಾರಣ ಏನು?
ಸದ್ಯ ಭಾರತೀಯ ವಾಯುಪಡೆ ಫೈಟರ್ ಜೆಟ್ ಕೊರತೆ ಎದುರಿಸುತ್ತಿದೆ ಎನ್ನಲಾಗಿದೆ. ಅಗತ್ಯವಿರುವ 42 ಸ್ಕ್ವಾಡ್ರನ್‌ಗಳಿಗೆ ಬದಲಾಗಿ ಕೇವಲ 29 ಸ್ಕ್ವಾಡ್ರನ್‌ಗಳನ್ನ ನಿರ್ವಹಿಸುತ್ತಿದೆ. 750 ಜೆಟ್‌ಗಳ ಅಗತ್ಯ ಇರುವ ಕಡೆ ಕೇವಲ 500 ಜೆಟ್‌ಗಳು ಸೇವೆ ಸಲ್ಲಿಸುತ್ತಿವೆ. ನೆರೆಯ ಪಾಕಿಸ್ತಾನ ಹಾಗೂ ಚೀನಾಗೆ ಪೈಪೋಟಿ ನೀಡಲು ಇನ್ನೂ 250 ಯುದ್ಧ ವಿಮಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಒಟ್ಟು 180 ತೇಜಸ್ ಮಾರ್ಕ್-1ಎ ಜೆಟ್‌ಗಳನ್ನು 1.10 ಲಕ್ಷ ಕೋಟಿ ರೂ.ಗಳಿಗೆ ಖರೀದಿಸುತ್ತಿದೆ.

ಮೂರು ಮಾದರಿಯ ತೇಜಸ್
ಭಾರತವು ಪ್ರಸ್ತುತ ಮೂರು ಮಾದರಿಯ ಲಘು ಯುದ್ಧ ವಿಮಾನಗಳನ್ನ ಹೊಂದಿದೆ. ತೇಜಸ್ ಮಾರ್ಕ್-1, ತೇಜಸ್ ಮಾರ್ಕ್-1ಎ ಮತ್ತು ತೇಜಸ್ ಮಾರ್ಕ್-2 ಯುದ್ಧ ವಿಮಾನಗಳನ್ನ ಹೊಂದಿದೆ. ಈಗಾಗಲೇ ತೇಜಸ್ ಮಾರ್ಕ್-1 ಮತ್ತು ಮಾರ್ಕ್-1ಎ ಉತ್ಪಾದನಾ ಕಾರ್ಯ ನಡೆದಿದ್ದು, ಮಾರ್ಕ್-2 ಉತ್ಪಾದನೆ ಪ್ರಾರಂಭವಾಗುವ ಹಂತದಲ್ಲಿದೆ.
1 ತೇಜಸ್ ಯುದ್ಧ ವಿಮಾನಕ್ಕೆ ತಗುಲುವ ವೆಚ್ಚ ಎಷ್ಟು?
ರಕ್ಷಣಾ ಸಚಿವಾಲಯ ಒಟ್ಟು 180 ತೇಜಸ್ ಮಾರ್ಕ್-1ಎ ಜೆಟ್‌ಗಳನ್ನ 1.10 ಲಕ್ಷ ಕೋಟಿ ರೂ.ಗಳಿಗೆ ಖರೀದಿಸುತ್ತಿದೆ. ಅಂದ್ರೆ ಒಂದು ಜೆಟ್‌ನ ಸರಾಸರಿ ವೆಚ್ಚ 611 ಕೋಟಿ ರೂ.ಗಳಷ್ಟಾಗುತ್ತದೆ. ಆದ್ರೆ ವಿದೇಶಿ ಫೈಟರ್ ಜೆಟ್‌ಗಳಿಗೆ ಸುಮಾರು 2,000 ಕೋಟಿ ರೂ.ಗಳಷ್ಟು ವೆಚ್ಚ ತಗುಲುತ್ತದೆ.
ಉದಾಹರಣೆಗೆ: 2016ರಲ್ಲಿ ಭಾರತ ಫ್ರಾನ್ಸ್‌ನೊಂದಿಗೆ 58,000 ಕೋಟಿ.ರೂ.ಗಳಿಗೆ 36 ರಫೇಲ್ ಜೆಟ್‌ಗಳಿಗೆ ಒಪ್ಪಂದ ಮಾಡಿಕೊಂಡಿತು. ಕಳೆದ ಏಪ್ರಿಲ್‌ನಲ್ಲೂ 63,000 ಕೋಟಿ ರೂ.ಗಳಿಗೆ 26 ಮರೈನ್ ರಫೇಲ್ ಯುದ್ಧ ವಿಮಾನಗಳನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿತು. ಅಂದ್ರೆ ಪ್ರತಿ ಜೆಟ್ ಬೆಲೆ 2,400 ಕೋಟಿ ರೂ.ಗಿಂತಲೂ ಹೆಚ್ಚು ವೆಚ್ಚವಾಗುತ್ತದೆ. ಇದರ ಅರ್ಥ ಒಂದು ಮರೈನ್ ರಫೇಲ್ ಬೆಲೆಗೆ 4 ತೇಜಸ್ ಯುದ್ಧ ವಿಮಾನಗಳನ್ನ ಖರೀದಿಸಬಹುದು ಎನ್ನುತ್ತಾರೆ ತಜ್ಞರು.

ತೇಜಸ್ ವಿಶೇಷತೆ ಏನು?
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಹೆಚ್‌ಎಎಲ್ ತಯಾರಿಸಿದೆ. ಇದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಕಾರ್ಯವನ್ನ ಆಧರಿಸಿದ್ದು, ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನ ಹೊಂದಿದೆ.
ತೇಜಸ್ ಮಾರ್ಕ್ 1A ವಿಶೇಷತೆ ಏನು?
ತೇಜಸ್ ಮಾರ್ಕ್ 1A ಆವೃತ್ತಿಯು ಮುಂದುವರಿದ, ಬಹು-ಪಾತ್ರದ ಯುದ್ಧ ವಿಮಾನವಾಗಿದೆ. ಇದು ಎಲ್ಲಾ ಹವಾಮಾನ ಕಾರ್ಯಾಚರಣೆಗಳಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಸ್ಥಳೀಯ 4.5-ಪೀಳಿಗೆಯ ವಿಮಾನವಾಗಿದೆ. ತೇಜಸ್ Mk-1A ತೇಜಸ್ Mk-1 ಆವೃತ್ತಿಗಿಂತ ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ, ಇದರಲ್ಲಿ ಇಸ್ರೇಲಿ EL/M-2025 AESA ರಾಡಾರ್, ಜಾಮರ್‌ಗಳೊಂದಿಗೆ ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಮತ್ತು ಬಿಯಾಂಡ್ ವಿಷುಯಲ್ ರೇಂಜ್ (BVR) ಸಾಮರ್ಥ್ಯಗಳು ಸೇರಿವೆ.
ಒಂದು ತಿಂಗಳ ಹಿಂದೆಯಷ್ಟೇ ನಾಸಿಕ್‌ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ವಿಮಾನ ಉತ್ಪಾದನಾ ವಿಭಾಗದಲ್ಲಿ ತೇಜಸ್ ಎಂಕೆ1ಎ ಯಶಸ್ವಿ ಹಾರಾಟ ನಡೆಸಿತು.
