– ಧೈರ್ಯಶಾಲಿ ತುಂಗಾಗೆ ಪೊಲೀಸರಿಂದ ಸನ್ಮಾನ
– ಓಡಿಕೊಂಡು ಹೋಗಿ ಕೊಲೆ ಆರೋಪಿ ಮನೆ ಮುಂದೆ ನಿಂತ ನಾಯಿ
ದಾವಣಗೆರೆ: ಎರಡು ಗಂಟೆ ಸತತವಾಗಿ 12 ಕಿಲೋಮೀಟರ್ ಓಡಿ ದಾವಣಗೆರೆಯ ಪೊಲೀಸ್ ಶ್ವಾನವೊಂದು ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಟ್ರೈನಿಂಗ್ ಪಡೆದ ಡಾಬರ್ ಮ್ಯಾನ್ ಜಾತಿಯ 9 ವರ್ಷದ ತುಂಗಾ ಹೆಸರಿನ ಶ್ವಾನ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದೆ. ಕೊಲೆ ನಡೆದ ಸ್ಥಳದಲ್ಲಿ ಕೆಲ ಕಾಲ ಸುತ್ತಿದ ತುಂಗಾ ನಂತರ ಓಡಲು ಶುರು ಮಾಡಿದೆ. ಸತತ ಎರಡು ಗಂಟೆ ಓಡಿ ನೇರವಾಗಿ ಆರೋಪಿಯ ಮನೆಯ ಮುಂದೆ ನಿಂತು ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದೆ.
ಕಳೆದ ಕೆಲ ದಿನಗಳ ಹಿಂದೆ ಆರೋಪಿ ಚೇತನ್, ಚಂದ್ರ ನಾಯಕ್ ಮತ್ತು ಅವರ ಸ್ನೇಹಿತರು ಸೇರಿಕೊಂಡು ಧಾರವಾರ ಜಿಲ್ಲೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದು, ಆ ಮನೆಯಲ್ಲಿ ಪಿಸ್ತೂಲ್ ಮತ್ತು ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಈ ವೇಳೆ ಇದ್ದನ್ನು ಹಂಚಿಕೊಳ್ಳುವ ವಿಚಾರದಲ್ಲಿ ಚಂದ್ರ ಮತ್ತು ಚೇತನ್ ನಡುವೆ ಜಗಳವಾಗಿದೆ. ಆಗ ಚಂದ್ರನನ್ನು ಚಾನೆಲ್‍ವೊಂದರ ಬಳಿಗೆ ಕರೆಯಿಸಿಕೊಂಡ ಚೇತನ್ ಕದ್ದ ಪಿಸ್ತೂಲ್‍ನಿಂದ ಚಂದ್ರನನ್ನು ಶೂಟ್ ಮಾಡಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ಕೊಲೆಯಾದ ಸ್ಥಳಕ್ಕೆ ತುಂಗಾಳನ್ನು ನೋಡಿಕೊಳ್ಳುತ್ತಿದ್ದ ಮುಖ್ಯ ಪೇದೆ ಶ್ವಾನವನ್ನು ಬೆಳಗ್ಗೆ 9.30ಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಘಟನೆಯ ಸ್ಥಳದಲ್ಲಿ ವಾಸನೆಯನ್ನು ತೆಗೆದುಕೊಂಡ ತುಂಗಾ ತಕ್ಷಣ ಅಲ್ಲಿಂದ ಓಡಲು ಶುರು ಮಾಡಿದ್ದಾಳೆ. ನಮಗೆ ಸುಳಿವೇ ಸಿಗಲಿಲ್ಲ. ಆದರೆ ತುಂಗಾ ಘಟನಾ ಸ್ಥಳದಿಂದ 12 ಕಿಮೀ ಓಡಿದ್ದಾಳೆ. ಮೊದಲು ಕಾಶಿಪುರ ತಂಡಾಗೆ ಬಂದಳು. ನಂತರ ಅಲ್ಲಿಂದ ಒಂದು ವೈನ್‍ಶಾಪ್‍ಗೆ ಹೋದಳು. ಅಲ್ಲಿಂದ ಒಂದು ಮನೆಯ ಬಳಿ ನಿಂತುಕೊಂಡಳು. ಅಲ್ಲಿ ಆರೋಪಿ ಚೇತನ್ ಫೋನಿನಲ್ಲಿ ಮಾತನಾಡುತ್ತಿದ್ದ. ಆತನನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಚೆನ್ನಗಿರಿ ವಿಭಾಗ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಮುನ್ನೊಲ್ಲಿ ಹೇಳಿದ್ದಾರೆ.
#davangerepolice
ಇಂದು ಶ್ರೀ ಅಮರ್ ಕುಮಾರ್ ಪಾಂಡೆ ಐ ಪಿ ಎಸ್., ಮಾನ್ಯ ಎಡಿಜಿಪಿ, L&O ರವರು ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ್ದು, ಇತ್ತೀಚಿಗೆ ಸೂಳೇಕೆರೆ ಬಳಿ ನಡೆದ ಕೊಲೆ ಪತ್ತೆ ಪ್ರಕರಣದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಶ್ವಾನದಳದ ಕ್ರೈಮ್ ವಿಭಾಗದ ಶ್ವಾನ *ತುಂಗಾ* ಗೆ ಹೂವಿನ ಹಾರ ಹಾಕುವ ಮೂಲಕ ಗೌರವಿಸಿದರು. pic.twitter.com/OGIKvqsDxv
— SP Davangere (@SpDavangere) July 17, 2020
ಸದ್ಯ ಆರೋಪಿ ಚೇತನ್‍ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದು, ನಾನೇ ಕೊಲೆ ಮಾಡಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಜೊತೆಗೆ ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹಿಡಿದು ಕೊಟ್ಟ ತುಂಗಾಗೆ ದಾವಣಗೆರೆ ಪೊಲೀಸರು ಸನ್ಮಾನ ಮಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ದಾವಣಗೆರೆ ಎಸ್‍ಪಿ, ಇಂದು ಶ್ರೀ ಅಮರ್ ಕುಮಾರ್ ಪಾಂಡೆ ಐಪಿಎಸ್, ಮಾನ್ಯ ಎಡಿಜಿಪಿಯವರು ದಾವಣಗೆರೆ ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದ್ದು, ಇತ್ತೀಚಿಗೆ ಸೂಳೇಕೆರೆ ಬಳಿ ನಡೆದ ಕೊಲೆ ಪತ್ತೆ ಪ್ರಕರಣದಲ್ಲಿ ಮಹತ್ತರ ಪಾತ್ರವಹಿಸಿದ್ದ ಶ್ವಾನದಳದ ಕ್ರೈಮ್ ವಿಭಾಗದ ಶ್ವಾನ ‘ತುಂಗಾ’ಗೆ ಹೂವಿನ ಹಾರ ಹಾಕುವ ಮೂಲಕ ಗೌರವಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತುಂಗಾನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ಅದರ ಟ್ರೈನರ್, ಈಕೆ ನಿಜವಾಗಿಯೂ ಬೆಸ್ಟ್ ಡಾಗ್. ಆಕೆ ಇನ್ನೂ ಪೊಲೀಸ್ ವಿಭಾಗಕ್ಕಾಗಿ 15 ವರ್ಷ ಕೆಲಸ ಮಾಡುವ ಶಕ್ತಿಯನ್ನು ಹೊಂದಿದ್ದಾಳೆ. ನಾನು ಹಲವಾರು ಶ್ವಾನಗಳಿಗೆ ಟ್ರೈನಿಂಗ್ ಮಾಡಿದ್ದೇನೆ. ಯಾವುದೇ ಶ್ವಾನವಾಗಲಿ ಕ್ರೈಮ್ ನಡೆದ ಸ್ಥಳದಿಂದ ವಾಸನೆ ಹಿಡಿದು ಕೇವಲ 3-4 ಕಿಲೋಮೀಟರ್ ಹೋಗುತ್ತವೆ. ಆದರೆ ತುಂಗಾ ಮಾತ್ರ 12 ಕಿಮೀವರೆಗೆ ಹೋಗಿ ಆರೋಪಿಯನ್ನು ಹಿಡಿದುಕೊಟ್ಟಿದ್ದಾಳೆ ಎಂದಿದ್ದಾರೆ.