ಪಬ್ಲಿಕ್ ಟಿವಿ ವಿಶೇಷ
1996 ಮತ್ತು 1998 ರ ಲೋಕಸಭಾ ಚುನಾವಣೆಗಳ ನಡುವೆ ಭಾರತದ ರಾಜಕೀಯ ವ್ಯವಸ್ಥೆಯು ಸಮ್ಮಿಶ್ರ ಮತ್ತು ಅಸ್ಥಿರತೆ ವಾತಾವರಣದಿಂದ ಕೂಡಿತ್ತು. ಈ ವರ್ಷಗಳಲ್ಲಿ ಭಾರತೀಯ ಸಂಸತ್ತಿನಲ್ಲಿ ಹಲವಾರು ಬೆಳವಣಿಗೆಗಳು ನಡೆದವು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ನ ಹಿಂದಿನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಸಾಮರ್ಥ್ಯ ಬೆಳೆಸಿಕೊಂಡಿತು. ಜೊತೆಗೆ ಪ್ರಾದೇಶಿಕ ಪಕ್ಷಗಳನ್ನು ಒಲಿಸಿಕೊಳ್ಳುವಲ್ಲಿಯೂ ಯಶಸ್ವಿಯಾಯಿತು.
ಚುನಾವಣೆಗೂ ಮುನ್ನ ಆಗಿದ್ದೇನು?: 1996 ರ ಚುನಾವಣೆಯ ನಂತರ ತೆರೆದುಕೊಂಡದ್ದು ಇದುವರೆಗೆ ಕಾಣದ ರಾಜಕೀಯ ತಂತ್ರಗಳು. ಬಿಜೆಪಿ ಮೊದಲ ಬಾರಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಸರ್ಕಾರವು ಸಂಖ್ಯಾಬಲವನ್ನು ಒಟ್ಟುಗೂಡಿಸಲು ಸಾಧ್ಯವಾಗಲಿಲ್ಲ. ಕೇವಲ 13 ದಿನಗಳಲ್ಲಿ ಸರ್ಕಾರ ಪತನವಾಯಿತು. ಹೆಚ್.ಡಿ.ದೇವೇಗೌಡ ಮತ್ತು ಐಕೆ ಗುಜ್ರಾಲ್ ಒಬ್ಬರ ನಂತರ ಒಬ್ಬರು ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸುವಾಗ ಹಲವಾರು ಸಂಕಷ್ಟ ಎದುರಿಸಿದರು. 1996 ರ ಚುನಾವಣೆಯ ನಂತರ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಲಾಯಿತು. ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಎರಡು ವಾರಗಳಲ್ಲಿ ಬಹುಮತ ಸಾಬೀತುಪಡಿಸಲು ಹೇಳಿದರು. ವಾಜಪೇಯಿ ವಿಫಲರಾದರು. ಕೇವಲ 13 ದಿನಗಳ ನಂತರ ವಾಜಪೇಯಿ ರಾಜೀನಾಮೆ ನೀಡುವಂತಾಯಿತು.
Advertisement
Advertisement
ಕುರ್ಚಿ ಕಳೆದುಕೊಂಡ ದೊಡ್ಡಗೌಡ್ರು: ಜನತಾ ದಳದ ದೇವೇಗೌಡರು (HD Deve Gowda) ಯುನೈಟೆಡ್ ಫ್ರಂಟ್‌ನ ಭಾಗವಾಗಿದ್ದರು. ಕಾಂಗ್ರೆಸ್ ಬೆಂಬಲದೊಂದಿಗೆ 1996 ರ ಜೂನ್ 1 ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಜನತಾ ದಳ, ಟಿಎಂವಿ, ಸಿಪಿಐ, ಎಸ್‌ಪಿ ಮತ್ತು ಡಿಎಂಕೆ ಪಕ್ಷಗಳ ಮೈತ್ರಿ ಆಡಳಿತವಿತ್ತು. ಆದರೆ ಆಂತರಿಕ ಭಿನ್ನಾಭಿಪ್ರಾಯ ಗೌಡರ ಸರ್ಕಾರವನ್ನೂ ಕಾಡಿತು. ಭಿನ್ನ ಸಿದ್ಧಾಂತ ಹೊಂದಿರುವ ಸಚಿವರ ನಡುವಿನ ಹಗ್ಗ ಜಗ್ಗಾಟವು ಮೈತ್ರಿ ಸರ್ಕಾರವನ್ನು ಕಾಡಿತು. ಸರ್ಕಾರದಲ್ಲಿ ಉದ್ವಿಗ್ನತೆ ಹೆಚ್ಚಿತು. ಅಂತಿಮವಾಗಿ ಕಾಂಗ್ರೆಸ್, ಯುನೈಟೆಡ್ ಫ್ರಂಟ್‌ನಿಂದ ಹೊಸ ಮುಖವನ್ನು ಬೆಂಬಲಿಸಲು ನಿರ್ಧರಿಸಿತು.
Advertisement
ಗುಜ್ರಾಲ್‌ಗೆ ‘3’ ಕಂಟಕ: ದೇವೇಗೌಡರನ್ನು ಬದಲಿಸಿ ಪ್ರಧಾನಿ ಗಾದಿಯಲ್ಲಿ ಯಾರನ್ನು ಕೂರಿಸಬೇಕು ಎಂಬ ಬಗ್ಗೆ ಮೈತ್ರಿಕೂಟದಲ್ಲಿ ಜಟಾಪಟಿ ನಡೆಯಿತು. ದೇವೇಗೌಡರ ನೇತೃತ್ವದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ವಿವಾದರಹಿತ ನಾಯಕ ಐ.ಕೆ.ಗುಜ್ರಾಲ್ (I K Gujral) ಅವರು ಅಧಿಕಾರ ವಹಿಸಿಕೊಳ್ಳುತ್ತಾರೆ. ಆದರೆ ವಿವಾದಗಳು ಗುಜ್ರಾಲ್ ಸರ್ಕಾರವನ್ನೂ ಕಾಡದೇ ಬಿಡಲಿಲ್ಲ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಕ್ರಮ ಕೈಗೊಳ್ಳಲು ಮುಂದಾಯಿತು. ಪ್ರಧಾನ ಮಂತ್ರಿ ಅವರೇ ಭಾಗವಾಗಿದ್ದ ಜನತಾ ದಳದಲ್ಲಿ ಬಂಡಾಯ ಶುರುವಾಯಿತು. ಯುನೈಟೆಡ್ ಫ್ರಂಟ್‌ನ ಹಲವಾರು ಸದಸ್ಯರು ಆ ಸಮಯದಲ್ಲಿ ಬಿಹಾರ ಸಿಎಂ ಆಗಿದ್ದ ಲಾಲು ಅವರ ರಾಜೀನಾಮೆಗೆ ಒತ್ತಾಯಿಸಿದರು. ಆದರೆ ಗುಜ್ರಾಲ್ ಮೌನವಾಗಿ ಉಳಿದು ಸಮಸ್ಯೆ ತಂದುಕೊಂಡರು. ಅಂತಿಮವಾಗಿ, ಆಗಿನ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್ (Joginder Singh) ಅವರನ್ನೇ ವರ್ಗಾಯಿಸಿದರು. ಜನತಾ ದಳದ ನಾಯಕರು ಲಾಲು ಪ್ರಸಾದ್‌ರನ್ನು ಉಚ್ಚಾಟಿಸುತ್ತಾರೆ. ಕೊನೆಗೆ ಲಾಲು ಹಾಗೂ ಬಿಹಾರದ ನಾಯಕರು ರಾಷ್ಟ್ರೀಯ ಜನತಾ ದಳ (RJD) ಪಕ್ಷ ಕಟ್ಟುತ್ತಾರೆ.
Advertisement
ಇತ್ತ ಉತ್ತರ ಪ್ರದೇಶದಲ್ಲಿ ಹಿಂಸಾಚಾರದ ಕಾರಣಕ್ಕೆ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿ ಗುಜ್ರಾಲ್ ಸರ್ಕಾರ ಮತ್ತೆ ರಾಜಕೀಯವಾಗಿ ಕೆಂಗಣ್ಣಿಗೆ ಗುರಿಯಾಯಿತು. ರಾಷ್ಟ್ರಪತಿ ಕೆಆರ್ ನಾರಾಯಣ್ (K R Narayan) ಅವರು ಕೇಂದ್ರದ ಶಿಫಾರಸಿಗೆ ಒಪ್ಪಿಗೆ ನೀಡಲು ನಿರಾಕರಿಸುತ್ತಾರೆ. ಅಲಹಾಬಾದ್ ಹೈಕೋರ್ಟ್ ಕೂಡ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ವಿರುದ್ಧ ತೀರ್ಪು ನೀಡಿತು. ಈ ಬೆಳವಣಿಗೆ ಗುಜ್ರಾಲ್ ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿತು. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ (Rajiv Gandhi) ಹತ್ಯೆಯ ಕುರಿತು ‘ಜೈನ್ ಆಯೋಗ’ದ ಮಧ್ಯಂತರ ವರದಿಯು, ತಮಿಳುನಾಡಿನ ಡಿಎಂಕೆ ಪಕ್ಷವು ಎಲ್‌ಟಿಟಿಇಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದೆ. ಭಾರತೀಯ ಸೇನೆಯು ಶ್ರೀಲಂಕಾದಲ್ಲಿ ರಾಜೀವ್ ಗಾಂಧಿ ಕೊಲೆಗಾರರಿಗೆ ಕುಮ್ಮಕ್ಕು ನೀಡುವ ಮತ್ತು ಎಲ್‌ಟಿಟಿಇ ಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಡಿಎಂಕೆ ಹೊಂದಿತ್ತು ಎಂದು ವರದಿಯು ತಿಳಿಸಿತು. ಡಿಎಂಕೆ ಕ್ರಮಗಳು ಭಾರತದಲ್ಲಿ ಎಲ್‌ಟಿಟಿಇಯ ಉಳಿವು ಮತ್ತು ಬೆಳವಣಿಗೆಯನ್ನು ಸುಗಮಗೊಳಿಸಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 1997 ರ ನವೆಂಬರ್ 18 ರಂದು ವರದಿ ಬಹಿರಂಗಗೊಂಡಿತು. ಇದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿ, ಆಡಳಿತ ಒಕ್ಕೂಟದಿಂದ ಡಿಎಂಕೆ ಹೊರಹಾಕಬೇಕೆಂಬ ಕೂಗು ಕೇಳಿಬಂತು. ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತು. ಆ ಸಮಯದಲ್ಲಿ ಡಿಎಂಕೆಯನ್ನು ವಿರೋಧಿಸಲು ಗುಜ್ರಾಲ್ ಅವರು ಮುಂದಾಗಲಿಲ್ಲ. ಹೀಗಾಗಿ ಸಂಸತ್‌ನಲ್ಲಿ ಮಂಡಿಸುವುದಕ್ಕೆ ನಿರಾಕರಿಸಿದರು. ನಂತರ ಅವರು ಜಂಟಿ ಸಂಸದೀಯ ಸಮಿತಿಯನ್ನು ಸ್ಥಾಪಿಸಿದರು. ಅದಕ್ಕೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿತು. ಕೊನೆಗೂ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಕಾಂಗ್ರೆಸ್ ಮತ್ತೊಮ್ಮೆ ಡಿಎಂಕೆಯನ್ನು ಆಡಳಿತ ಒಕ್ಕೂಟದಿಂದ ನಿರ್ಗಮಿಸುವಂತೆ ಒತ್ತಾಯಿಸಿತು. ಈ ಬೆಳವಣಿಗೆ ಗುಜ್ರಾಲ್ ರಾಜೀನಾಮೆಗೆ ಕಾರಣವಾಯಿತು. ಆದರೆ ಸಂಸತ್ತಿನ ವಿಸರ್ಜನೆಗೆ ಕರೆ ನೀಡಲಿಲ್ಲ. ಪರಿಣಾಮವಾಗಿ ಮತ್ತೊಂದು ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಯಿತು.
32 ರಾಜ್ಯ, 8 ದಿನದ ಚುನಾವಣೆ: 1998 ರ ಲೋಕಸಭಾ ಚುನಾವಣೆ 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಫೆ.16 ರಿಂದ 23 ರ ವರೆಗೆ ನಡೆಯಿತು. 8 ದಿನಗಳ ಕಾಲ ಮತದಾನ ನಡೆಯಿತು.
7 ರಾಷ್ಟ್ರೀಯ, 30 ಪ್ರಾದೇಶಿಕ ಪಕ್ಷಗಳು: 7 ರಾಷ್ಟ್ರೀಯ ಹಾಗೂ 30 ಪ್ರಾದೇಶಿಕ ಪಕ್ಷಗಳು ಸೇರಿ ಒಟ್ಟು 176 ಪಕ್ಷಗಳು ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಕ್ಷೇತ್ರಗಳು: 543
ಒಟ್ಟು ಮತದಾರರು: 60,58,80,192
ಪುರುಷರು: 31,66,92,789
ಮಹಿಳೆಯರು: 28,91,87,403
ಮತದಾನ: 37,54,41,739 ಮಂದಿ
ವೋಟಿಂಗ್ ಪ್ರಮಾಣ: 61.97%
ಅಭ್ಯರ್ಥಿಗಳು: 4,750
ಮಹಿಳಾ ಅಭ್ಯರ್ಥಿಗಳು: 274 (ಗೆಲುವು 43)
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬಿಜೆಪಿ – 182
ಕಾಂಗ್ರೆಸ್ – 141
ಸಿಪಿಎಂ – 32
ಎಸ್‌ಎಪಿ – 12
ಸಿಪಿಐ – 9
ಬಿಎಸ್‌ಪಿ – 5
ಜೆಡಿ – 6
ಇತರೆ – 150
ಪಕ್ಷೇತರ – 6
ಪ್ರಾದೇಶಿಕ ಪಕ್ಷಗಳ ಸಾಧನೆ: ಚುನಾವಣೆಯಲ್ಲಿ ಹಲವಾರು ಪ್ರಾದೇಶಿಕ ಪಕ್ಷಗಳು ಉತ್ತಮ ಸಾಧನೆ ಮಾಡಿದವು. ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಒಟ್ಟಾಗಿ 254 ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗಿಂತ 110 ಸ್ಥಾನಗಳಿಗೆ ಹೆಚ್ಚಿಸಿಕೊಂಡಿತು. ಯುನೈಟೆಡ್ ಫ್ರಂಟ್ ಕೇವಲ 64 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.
2ನೇ ಬಾರಿಗೆ ವಾಜಪೇಯಿ ಪ್ರಧಾನಿ: ವಾಜಪೇಯಿ ಅವರು ಮತ್ತೆ ಪ್ರಧಾನಿ ಕುರ್ಚಿ ಅಲಂಕರಿಸಿದರು. ದೇಶವನ್ನು ಶಾಂತಿ ಮತ್ತು ಭದ್ರತೆಯ ಹೊಸ ಯುಗಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು. ವಿಶ್ವಮಟ್ಟದಲ್ಲಿ ಭಾರತವನ್ನು ಪವರ್ ಪ್ಲೇಯರ್ ಎಂದು ಬಿಂಬಿಸುವ ಯತ್ನ ಮಾಡಿದರು. ಪೋಖ್ರಾನ್‌ನಲ್ಲಿನ ಪರಮಾಣು ಪರೀಕ್ಷೆ ಮತ್ತು ಕಾರ್ಗಿಲ್ ಯುದ್ಧ. ಭಾರತದ ಸಾಮರ್ಥ್ಯ ಏನು ಎಂಬುದನ್ನು ಈ ಎರಡೂ ಬೆಳವಣಿಗೆಗಳು ತಿಳಿಸಿಕೊಟ್ಟವು.
ಕರ್ನಾಟಕದಲ್ಲಿ ಬಿಜೆಪಿಗೆ ಎರಡಂಕಿ: 90 ರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಖಾತೆ ತೆರೆಯಿತು. ಅಲ್ಲಿಂದ ಮುಂದೆ ಹಂತ ಹಂತವಾಗಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿತು. 1998 ರಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಕರ್ನಾಟಕದಿಂದ ಮೊದಲ ಬಾರಿಗೆ ಬಿಜೆಪಿ ತನ್ನ ಸ್ಥಾನಗಳನ್ನು ಎರಡಂಕಿಗೆ ಹೆಚ್ಚಿಸಿಕೊಂಡಿತು. ಕಾಂಗ್ರೆಸ್ ಒಂದಂಕಿಗೆ ಕುಸಿಯಿತು.
ಬಿಜೆಪಿ – 13
ಕಾಂಗ್ರೆಸ್ – 9
ಜೆಡಿ – 3
ಎಲ್‌ಎಸ್ – 3