ಬೆಂಗಳೂರು: ಇತ್ತೀಚೆಗೆ ಬೆಂಗಳೂರು ನಗರದಲ್ಲಿ (Bengaluru City) ವಶಪಡಿಸಿಕೊಳ್ಳಲಾದ 1,90,000 ಕೆಜಿ ಯೂರಿಯಾ ಕೇರಳದ್ದಲ್ಲ, ಕರ್ನಾಟಕದ್ದೇ ಅನ್ನೋದು ಪ್ರಾಥಮಿಕ ತನಿಖಾ ವರದಿಯಲ್ಲಿ ಖಾತರಿಯಾಗಿದೆ.
ಹೌದು. ಇತ್ತೀಚೆಗೆ ಅಡಕಮಾರನಹಳ್ಳಿ ಗೋಡೌನ್‌ವೊಂದರ ಮೇಲೆ ದಾಳಿ ನಡೆಸಿದ್ದ ಡಿಆರ್‌ಐ (DRI) ಅಧಿಕಾರಿಗಳು 190 ಟನ್ ಯೂರಿಯಾ ಜಪ್ತಿ ಮಾಡಿದ್ದರು. ಮೊದಲಿಗೆ ಇದಲು ಕೇರಳದಿಂದ ಬಂದ ಯೂರಿಯಾ (Urea) ಅಂತ ಹೇಳಲಾಗಿತ್ತು. ಆದ್ರೆ ಪ್ರಾಥಮಿಕ ತನಿಖೆಯಲ್ಲಿ ಇದು ಕರ್ನಾಟಕದ್ದೇ ಯೂರಿಯಾ. ರಾಯಚೂರು ಹಾಗೂ ಶಿವಮೊಗ್ಗಕ್ಕೆ ಸೇರಿದ್ದು ಅಂತ ಹೇಳಲಾಗ್ತಿದೆ.
ಜಪ್ತಿ ಮಾಡಿದ ಯೂರಿಯಾ ಕರ್ನಾಟಕದ್ದೇ, ಆದ್ರೆ ಕಳ್ಳಸಾಗಾಟ ಮಾಡಿದ್ದು ಮಾತ್ರ ಕೇರಳ ಹುಡುಗ ಅಷ್ಟೇ. ಕೇರಳ ಮೂಲದವರು ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡಿದ್ದಾರೆ. ನಂತರ ರಾಯಚೂರು, ಶಿವಮೊಗ್ಗದಿಂದ ಯೂರಿಯಾ ಸಾಗಿಸಲಾಗಿದೆ ಅನ್ನೋದು ದೃಢಪಟ್ಟಿದೆ. ಆದ್ರೆ ಇದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ಕೈವಾಡ ಇದ್ಯಾ ಇಲ್ವಾ ಅನ್ನೋದು ತನಿಖೆ ಬಳಿಕ ಬೆಳಕಿಗೆ ಬರಬೇಕಿದೆ.
ಜಪ್ತಿ ಮಾಡಿದ್ದೆಲ್ಲಿ?
1,90,000 ಕೆಜಿ ಯೂರಿಯಾ ವಶಕ್ಕೆ ಪಡೆಯಲಾಗಿತ್ತು. ತಜೀರ್ ಖಾನ್ ಯೂಸುಫ್ ಎಂಬಾತ ಶೆಡ್‌ನ ಬಾಡಿಗೆ ಪಡೆದಿದ್ದ. ಕಳೆದ ಆರು ತಿಂಗಳ ಹಿಂದೆ 40,000 ರೂ.ಗೆ ಬಾಡಿಗೆ ಪಡೆದಿದ್ದ. ಸಲೀಂ ಖಾನ್ ಎಂಬವರಿಗೆ ಸೇರಿದ ಜಾಗ ಇದು. ದಾಸನಪುರ ಹೋಬಳಿ, ಶಿವನಪುರದಲ್ಲಿ ಶೆಡ್ ಇದಾಗಿದ್ದು, ತಮಿಳುನಾಡಿಗೆ ಇಲ್ಲಿಂದ ಪ್ಯಾಕ್ ಮಾಡಿ ಕಳುಹಿಸಲಾಗುತ್ತಿತ್ತು. ಕೇಂದ್ರ ಸರ್ಕಾರದಿಂದ ವಿನಾಯಿತಿ ಆಧಾರದ ಮೇಲೆ 45 ಕೆಜಿ ತೂಕದ ಯೂರಿಯಾ ರಾಜ್ಯಕ್ಕೆ ಕೊಡುತ್ತಿದ್ದರು. ಇದನ್ನು ಇಲ್ಲಿಗೆ ತಂದು 50 ಕೆಜಿ ಚೀಲವನ್ನಾಗಿ ಮಾಡಿ ಬೇರೆ ಚೀಲಗಳಿಗೆ ತುಂಬಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಕೇಂದ್ರ ಸರ್ಕಾರ 2,321 ರೂ. ಬೆಲೆಯ 45 ಕೆಜಿ ತೂಕದ ಯೂರಿಯಾಗೆ 2054 ರೂ. ಸಬ್ಸಿಡಿ ನೀಡಿ 266 ರೂ.ಗೆ ರಾಜ್ಯಕ್ಕೆ ನೀಡುತ್ತದೆ. ಅದನ್ನು ಕಾಳಸಂತೆಯಲ್ಲಿ 2,500 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗ ಅಧಿಕಾರಿಗಳು ಗೋಡೌನ್ ಸೀಜ್‌ಗೆ ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ಕಳ್ಳ ಮಾರಾಟ ಮಾಡುತ್ತಿದ್ದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ.
ಕೇಂದ್ರದ ಸಬ್ಸಿಡಿ ರಸಗೊಬ್ಬರ ವಿತರಣೆ ಹೇಗೆ ನಡೆಯುತ್ತದೆ?
– ಕೇಂದ್ರದ ಸಬ್ಸಿಡಿ ರಸಗೊಬ್ಬರ ವಿತರಣೆಗೆ ನಿಗದಿತ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿರುತ್ತದೆ
– ಈ ಕಂಪನಿಗಳ ವಿವರ ರಾಜ್ಯಕ್ಕೆ ರವಾನೆಯಾಗಿರುತ್ತದೆ
– ಅದಾದ ಬಳಿಕ ರಾಜ್ಯ ಹಾಗೂ ಜಿಲ್ಲೆಗಳ ನೋಂದಾಯಿತ ಡೀಲರ್ಸ್ಗೆ ರಸಗೊಬ್ಬರ ಸರಬರಾಜು ಆಗುತ್ತದೆ
– ಡೀಲರ್ಸ್ ಮುಖಾಂತರ ರೈತರಿಗೆ ರಸಗೊಬ್ಬರ ಸಿಗುತ್ತದೆ



