ಗದಗ: 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ಹಾಕಲ್ಲ. ಒಂದು ವಾರ ಮುಂದೂಡುವ ಸಾಧ್ಯತೆ ಇದೆ ಎಂದು ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.
ಗದಗ ಜಿಲ್ಲಾಡಳಿತ ಭವನದಲ್ಲಿ ಸಿಎಂ ವೀಡಿಯೋ ಕಾನ್ಫರೆನ್ಸ್ ಹಾಗೂ ಅಧಿಕಾರಿಗಳ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದು ತಡವಾಗಲಿದೆ. 1 ಮತ್ತು 2ನೇ ಹಂತದ ಲಸಿಕೆ ಮುಗಿಯಬೇಕಿದೆ. ನೋಂದಣಿ ಮಾಡಲಾಗುತ್ತಿದೆ. ಮೇ 18 ರಿಂದ 20ರವರೆಗೆ ಹೋಗಬಹುದು. ಅಷ್ಟರಲ್ಲಿ ಇನ್ನಷ್ಟು ಡೋಸ್ ಸಂಗ್ರಹಿಸಿ ಮುಂದೆ ದಿನಾಂಕ ನಿಗದಿಯಾದ ನಂತರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಹೇಳಿದರು. ನಂತರ ಪಾಸಿಟಿವ್ ಬಂದ ಎಲ್ಲರಿಗೂ ರೆಮ್‍ಡಿಸಿವರ್ ಇಂಜೆಕ್ಷನ್ ಕೊಡುವುದಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ರೆಮ್‍ಡಿಸಿವರ್ ಕೊಡಿ ಅಂತ ವೈದ್ಯರಿಗೆ ಸೂಚಿಸಿದರು.
ಗದಗ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ರೆಮ್‍ಡಿಸಿವಿರ್ ಕೊರತೆ ಇಲ್ಲ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೊರತೆ ಇದೆ. ಜಿಲ್ಲೆಯಲ್ಲಿ 650 ಕೋವಿಡ್ ಸೋಂಕಿತರಿದ್ದಾರೆ. 182 ಜನ ಜಿಮ್ಸ್ ಸೇರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 72 ಜನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 467 ಜನ ಹೋಮ್ ಐಸುಲೇಶನ್ ನಲ್ಲಿದ್ದಾರೆ. ಗದಗ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ.
ಕೋವಿಡ್ ಕೇರ್ ಕೇಂದ್ರದಲ್ಲಿ 700 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 500 ಹಾಸಿಗೆ ವ್ಯವಸ್ಥೆ ಇದ್ದು, 200 ಹೆಚ್ಚುವರಿ ಹಾಸಿಗೆ ವ್ಯವಸ್ಥೆಗೆ ಸಿದ್ದತೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ 150 ಹಾಸಿಗೆ ವ್ಯವಸ್ಥೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡುಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಮ್.ಎಲ್.ಸಿ ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಎಸ್.ಪಿ ಯತೀಶ್ ಹಾಗೂ ಜಿ.ಪಂ ಮುಖ್ಯಾಧಿಕಾರಿ ಉಪಸ್ಥಿತರಿದ್ದರು.