ಕೋಲಾರ: ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಪೂರ್ಣಗೊಂಡಿದ್ದು, ಈ ಹಿಂದೆ ಜಿಲ್ಲೆಯಲ್ಲಿ 12,95,265 ಮತದಾರರಿದ್ದರು. ಈ ಪೈಕಿ ಎಸ್‌ಐಆರ್ ಪ್ರಕ್ರಿಯೆ ಬಳಿಕ 1,71,034 ಮತದಾರರು ಕರಡು ಮತದಾರರ ಪಟ್ಟಿಯಿಂದ (Draft Voter’s List) ಹೊರಗುಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ (MR Ravikumar) ತಿಳಿಸಿದ್ದಾರೆ.
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯದಮದರೊಂದಿಗೆ ಮಾತನಾಡಿದ ಅವರು, ಸದ್ಯ ಜಿಲ್ಲೆಯಲ್ಲಿ 11,24,231 ಮತದಾರರು ಕರಡು ಪಟ್ಟಿಯಲ್ಲಿದ್ದು, ಇವರಲ್ಲಿ 5,58,680 ಪುರುಷರು, 5,65,461 ಮಹಿಳೆಯರು ಹಾಗೂ 90 ಮಂದಿ ಇತರ ಮತದಾರರು ಇದ್ದಾರೆ. ಕೋಲಾರ ಜಿಲ್ಲೆಯಲ್ಲಿ 1,71,034 ಮತದಾರರು ಹೊರಗಿಡಲಾಗಿದ್ದು, ಇದರಲ್ಲಿ 37,527 ಮತದಾರರು ಗೈರು, 86,992 ಮಂದಿ ಶಾಶ್ವಾತವಾಗಿ ವರ್ಗಾವಣೆಗೊಂಡಿದ್ದು, 29,006 ಮತದಾರರು ಮರಣ ಹೊಂದಿದ್ದಾರೆ. ಮತ್ತು 16,285 ಮಂದಿ ದ್ವಿಮುದ್ರಣಗೊಂಡಿದ್ದಾರೆ. ಅಕ್ಟೋಬರ್ 27ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ ಎಂದರು. ಇದನ್ನೂ ಓದಿ: SIR ಮೊದಲ ಮತದಾರರ ಕರಡು ಪಟ್ಟಿ ರಿಲೀಸ್; 1,07,96,339 ಮತದಾರರ ಹೆಸರು ಡಿಲೀಟ್
ಜಿಲ್ಲೆಯಲ್ಲಿ ಒಟ್ಟು 1,578 ಮತಗಟ್ಟೆಗಳಿದ್ದು, ಜೂನ್ 30ರಂದು ಆರಂಭವಾಗಿದ್ದ ಎಸ್‌ಐಆರ್ ಪ್ರಕ್ರಿಯೆ ಆಗಸ್ಟ್ 18 ರಂದು ಪೂರ್ಣಗೊಂಡಿದೆ. ಈ ಕುರಿತು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಲಾಗಿದ್ದು, ಕರಡು ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮತ್ತು ಹೆಸರು ಸೇರಿಸಬೇಕಾದಲ್ಲಿ ಫಾರಂ-6 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಕೋಲಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದ್ದು, ಎಸ್‌ಐಆರ್ ಯಶಸ್ವಿಗೆ ಸಹಕರಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಕೆಜಿಎಫ್ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದ್ರೆ 20 ಸಾವಿರ ಮತದಾರರು ಹೊರಗುಳಿದಿದ್ದು, ವಲಸಿಗರೆ ಹೆಚ್ಚಾಗಿರುವ ಕಾರಣ ಅಲ್ಲಿ ಹೆಚ್ಚು ಮತದಾರರನ್ನ ಕೈ ಬಿಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಚ್ಛಗೊಳಿಸಬೇಕಾದ ಖಾಲಿ ನಿವೇಶನಗಳಿಗೆ ನೋಟಿಸ್ ಅಂಟಿಸಿ: ಕೃಷ್ಣ ಬೈರೇಗೌಡ
