ಕೋಲಾರ: ಕಳೆದ ಮೂರು ದಿನಗಳ ಹಿಂದೆ ಸಹಜ ಸಾವು ಎಂದು ತೀರ್ಮಾನ ಮಾಡಿ ಅಪ್ರಾಪ್ತ ಬಾಲಕಿ ಅಂತ್ಯಸಂಸ್ಕಾರ ನಡೆಸಿದ್ದ ಮೃತದೇಹವನ್ನು ಮತ್ತೆ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತ ಬಾಲಕಿ ಕಳೆದ ಮೂರು ದಿನಗಳ ಹಿಂದೆ ಸಂಪ್‍ನಲ್ಲಿ ಬಿದ್ದು ಸಾವನ್ನಪ್ಪಿದ್ದಾಗಿ ಪೋಷಕರು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಭಾನುವಾರ ಬಾಲಕಿಯ ಪೋಷಕರಿಗೆ ಬಂದ ಫೋನ್ ಕರೆ ಆಕೆಯ ಸಾವಿನ ಬಗ್ಗೆ ಅನುಮಾನವನ್ನು ಮೂಡಿಸಿತ್ತು. ಹೀಗಾಗಿ ಪಿಯುಸಿ ವಿದ್ಯಾರ್ಥಿನಿಯ ಸಾವಿನ ರಹಸ್ಯ ತಿಳಿಯಲು ಇಂದು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಲಾಯಿತು.
Advertisement
Advertisement
ಶನಿವಾರ ಬಾಲಕಿ ಮನೆಯ ಎದುರಿಗಿದ್ದ ಸಂಪ್‍ನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಭಾನುವಾರ ಬಾಲಕಿಯ ಪ್ರಿಯಕರ ಎಂದು ಪೋಷಕರಿಗೆ ಫೋನ್ ಮಾಡಿದ್ದ ಯುವಕನ ವರ್ತನೆ ಕಂಡ ಪೋಷಕರು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಫೋನ್ ಮಾಡಿದ ವೇಳೆ ಯುವಕ, ನಾನು ಪ್ರೀತಿಸುತ್ತಿದ್ದ ಹುಡುಗಿಗೆ ಏನಾಯ್ತು? ಎಂದು ಪೋಷಕರಿಗೆ ಧಮ್ಕಿ ಹಾಕಿ ಕರೆ ಕಟ್ ಮಾಡಿದ್ದ. ಇದರಿಂದ ಅನುಮಾನಗೊಂಡ ಪೋಷಕರು ಯಾರೋ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
Advertisement
ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕಿ ಮನೆಯಲ್ಲಿ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದಳು. ಎಂದಿನಂತೆ ಶನಿವಾರ 3 ಗಂಟೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ಬಂದಿದ್ದಳು. ಈ ವೇಳೆ ಆಕೆಯನ್ನು ಮನೆಯಲ್ಲಿ ಬಿಟ್ಟು ಪೋಷಕರು ತೋಟದ ಬಳಿ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದ ಬಳಿಕ ಮಗಳು ಮನೆಯಲ್ಲಿ ಇಲ್ಲದಿರುವುದು ತಿಳಿದಿತ್ತು. ಆ ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು ಬಾಲಕಿ ಸಿಕ್ಕಿರಲಿಲ್ಲ. ಬಳಿಕ ನೀರೆತ್ತಲು ಸಂಪ್ ತೆಗೆದ ವೇಳೆ ಬಾಲಕಿಯ ಶವ ಪತ್ತೆಯಾಗಿತ್ತು.
Advertisement
ಆ ವೇಳೆ ಎಲ್ಲೋ ಆಯಾ ತಪ್ಪಿ ಸಂಪ್‍ಗೆ ಬಿದ್ದಿರಬಹುದು ಎಂದು ಪೋಷಕರು ಶನಿವಾರ ಸಂಜೆಯೇ ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿಯ ಅಂತಿಮ ಸಂಸ್ಕಾರ ಪೂರ್ಣಗೊಳಿಸಿದ್ದರು. ಭಾನುವಾರ ಯುವಕನಿಂದ ಫೋನ್ ಕರೆ ಬಂದ ಹಿನ್ನೆಲೆಯಲ್ಲಿ ಇಂದು ಪೊಲೀಸರು, ತಹಶೀಲ್ದಾರ್ ಶೋಭಿತಾ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿಲಾಯಿತು. ಮೃತ ದೇಹದ ಕೆಲ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‍ಎಸ್‍ಎಲ್)ವರದಿಗಾಗಿ ಕಳುಹಿಸಿಕೊಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಶನಿವಾರ ಸಂಜೆ ಮನೆಯಲ್ಲಿ ಏನಾಯ್ತು? ಭಾನುವಾರದ ಬಂದ ಫೋನ್ ಕರೆ ಯಾರದ್ದು? ಬಾಲಕಿ ಸಾವು ಆಕಸ್ಮಿಕವೋ, ಕೊಲೆಯೋ ಎಂಬ ಅನುಮಾನಗಳು ಪೋಷಕರನ್ನು ಕಾಡುತ್ತಿದೆ. ಘಟನೆಯ ಸತ್ಯಾಂಶವೆಲ್ಲವೂ ಪೊಲೀಸ್ ತನಿಖೆಯ ಬಳಿಕವೇ ಹೊರಬರಬೇಕಾಗಿದೆ.