ರಾಮನಗರ: ಬಮೂಲ್ ಚುನಾವಣೆಯಲ್ಲಿ (Bamul Election) ಕಾಂಗ್ರೆಸ್‌ನಿಂದ (Congress) ಅಧಿಕಾರ ದುರುಪಯೋಗ ಆಗಿದ್ಯಾ ಎಂಬ ಅನುಮಾನ ವ್ಯಕ್ತವಾಗಿದೆ. ಚುನಾವಣೆ ಹಿಂದಿನ ದಿನವೇ ಚನ್ನಪಟ್ಟಣ ತಾಲೂಕಿನ ಏಕಾಏಕಿ 17 ಮತದಾರರನ್ನು ಅನರ್ಹ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚನ್ನಪಟ್ಟಣ (channapatna) ಬಮೂಲ್ ಕ್ಷೇತ್ರದ 17 ಮತದಾರರನ್ನು ಸಹಕಾರ ಇಲಾಖೆ ಸಹಾಯಕ ನಿಬಂಧಕ ವೆಂಕಟೇಶ್, ಏಕಾಏಕಿ ಅನರ್ಹ ಮಾಡಿದ್ದಾರೆ. ಜೆಡಿಎಸ್ ಬೆಂಬಲಿತ ಮತಗಳನ್ನೇ ಟಾರ್ಗೆಟ್ ಮಾಡಿ ಅನರ್ಹ ಮಾಡಿರುವ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ಸಹಾಯಕ ನಿಬಂಧಕ(ಎಆರ್) ವಿರುದ್ಧ ಜೆಡಿಎಸ್ ಬೆಂಬಲಿತ ಮತದಾರರು ಆಕ್ರೋಶ ಹೊರಹಾಕಿದ್ದಾರೆ. ರಾಮನಗರದ ಎಆರ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿ ವೆಂಕಟೇಶ್‌ಗೆ ತರಾಟೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಸದ್ಯ ಶಾಲೆಗಳಿಗೆ ಯಾವುದೇ ಕೊರೊನಾ ಮಾರ್ಗಸೂಚಿ ಇಲ್ಲ: ಮಧು ಬಂಗಾರಪ್ಪ
ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಹಕಾರ ಇಲಾಖೆ ಅಧಿಕಾರಿಗಳು ಶಾಮೀಲಾಗಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸೂಚನೆ ಮೇರೆಗೆ ಜೆಡಿಎಸ್ ಬೆಂಬಲಿತ ಮತಗಳ ಅನರ್ಹ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಅನುಕೂಲ ಮಾಡಿಕೊಡಲಾಗಿದೆ ಎಂದು ಚನ್ನಪಟ್ಟಣದ 17 ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.
ದೂರಿನ ಬಗ್ಗೆ ಅರ್ಜಿ ಬಂದ ಹಿನ್ನೆಲೆಯಲ್ಲಿ ಮತಗಳ ಅನರ್ಹಗೊಳಿಸಿದ್ದೇನೆ ಎಂದು ಎಆರ್ ವೆಂಕಟೇಶ್ ಸಮಜಾಯಿಷಿ ಕೊಟ್ಟಿದ್ದು, ಯಾವುದೇ ಪರಿಶೀಲನೆ ನಡೆಸದೇ ಮತಗಳ ಅನರ್ಹ ಮಾಡಿದ್ದನ್ನು ಎಆರ್ ವೆಂಕಟೇಶ್ ಒಪ್ಪಿಕೊಂಡಿದ್ದಾರೆ. ದೂರು ಅರ್ಜಿ ಬಂದರೆ ಕ್ರಮ ಕೈಗೊಳ್ಳುವ ಅಧಿಕಾರ ನನಗಿದೆ. ಹಾಗಾಗಿ 17 ಮತಗಳನ್ನು ಅನರ್ಹ ಮಾಡಿದ್ದೇನೆ ಎಂದು ಸಬೂಬು ಹೇಳಿದ್ದಾರೆ. ಸಹಕಾರ ಇಲಾಖೆಯ ಈ ಅಧಿಕಾರಿ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.