ಬೆಂಗಳೂರು: ಕೊಟ್ಟ ಮಾತಿನಂತೆ ತಪ್ಪದೇ ನಡೆಯಲು ಯಡಿಯೂರಪ್ಪ ತಂತ್ರಗಳ ಮೇಲೆ ತಂತ್ರ ಮಾಡ್ತಿದ್ದಾರೆ. ಅವರೆಲ್ಲಾ ಈಗ ನನ್ನವರು ಎಂಬ ಅಸ್ತ್ರ ಪ್ರಯೋಗಿಸಿಲು ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಅಲ್ಲ ಈಗಿರುವ ಅವರೆಲ್ಲಾ ನನ್ನವರಲ್ಲ ಎಂಬ ಲೆಕ್ಕಚಾರಕ್ಕೆ ಯಡಿಯೂರಪ್ಪ ಬಂದ್ರಾ ಅನ್ನೋ ಗೊಂದಲವೂ ಹೆಚ್ಚಾಗಿದೆ. ಕ್ಯಾಬಿನೆಟ್ ವಿಳಂಬದಿಂದಾಗಿಯೇ ಈ ತಂತ್ರಗಳು, ಗೊದಲಗಳು ಹೆಚ್ಚು ಸದ್ದು ಮಾಡುತ್ತಿದೆ.
ಅಂದಹಾಗೆ ಸಂಕ್ರಾಂತಿ ಮುಗಿಯುತ್ತಿದಂತೆ ಬಿಜೆಪಿಯಲ್ಲಿ ಆಟ ಮೇಲಾಟ ಭರ್ಜರಿಯಾಗಿಯೆ ನಡೆಯುತ್ತಿದೆ. ಕೊಟ್ಟ ಮಾತಿನಂತೆ ಗೆದ್ದವರನ್ನ ಸಚಿವರನ್ನಾಗಿ ಮಾಡಲು ಯಡಿಯೂರಪ್ಪ ಹರಸಾಹಸ ಪಡ್ತಿದ್ದಾರೆ. ಹೈಕಮಾಂಡ್ ಮುಂದೆ ಯಡಿಯೂರಪ್ಪ ನನ್ನವರು ಅಸ್ತ್ರ ಪ್ರಯೋಗ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಈಗ ಕ್ಯಾಬಿನೆಟ್‍ನಲ್ಲಿ ಇರೋರನ್ನ ಏನ್ ಬೇಕಾದ್ರೂ ಮಾಡಿ. ಈಗಿರುವವರ ಮೇಲೆ ಏನು ತೀರ್ಮಾನ ಮಾಡಿದ್ರೂ ನನಗೇನಿಲ್ಲ..! ಆದ್ರೆ ಸರ್ಕಾರ ರಚಿಸಲು ಕಾರಣರಾದ ಆ 17 ಜನ ಮಾತ್ರ ನನ್ನವರು. ಆ ನನ್ನವರನ್ನ ಯಾವುದೇ ಕಾರಣಕ್ಕೂ ಕೈ ಬಿಡಲು ನಾನು ತಯಾರಿಲ್ಲ. ಆ 17 ಜನರನ್ನ ಸಚಿವ ಸ್ಥಾನದಲ್ಲಿ ಕೂರಿಸಿ, ಉಳಿದಂತೆ ಬೇಕಾದ್ದು ಮಾಡಿ ಎಂದು ಆಪ್ತರಾಗಿರುವ ಹೈಕಮಾಂಡ್ ನಾಯಕರೊಬ್ಬರ ಮುಂದೆ ಯಡಿಯೂರಪ್ಪ ಅಸ್ತ್ರ ಪ್ರಯೋಗಿಸಿದ್ದಾರೆ.
ಅಮಿತ್ ಶಾ ಜತೆ ಮಾತುಕತೆ ವೇಳೆ ನನ್ನವರು ಅಸ್ತ್ರ ಪ್ರಸ್ತಾಪ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಪ್ತರ ಬಳಿ ಪ್ರಸ್ತಾಪ ಮಾಡಿದ್ದನ್ನೇ ಅಧಿಕೃತವಾಗಿ ಹೈಕಮಾಂಡ್ ಚರ್ಚೆ ವೇಳೆಯೂ ಪ್ರಸ್ತಾಪಿಸಲು ಬಿಎಸ್‍ವೈ ಮುಂದಾಗಿರೋದು ಕುತೂಹಲ ಮೂಡಿಸಿದೆ. ಆದ್ರೆ ಯಡಿಯೂರಪ್ಪ ಅಸ್ತ್ರಕ್ಕೆ ಹೈಕಮಾಂಡ್ ಬಳಿ ಇರುವ ಪ್ರತ್ಯಾಸ್ತ್ರ ಏನು? ಅನಿವಾರ್ಯವಾಗಿ ಯಡಿಯೂರಪ್ಪ ಪ್ರಸ್ತಾಪವನ್ನ ಒಪ್ಪಿಕೊಳ್ಳುತ್ತಾ? ಇಲ್ಲ ರಾಡಿ ಮಾಡಿಕೊಳ್ಳುತ್ತಾ? ಯಡಿಯೂರಪ್ಪ ಪಟ್ಟಿಗೆ ಬಿಜೆಪಿ ಹೈಕಮಾಂಡ್ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿರೋದಂತೂ ಸತ್ಯ.