– ಆರೋಪಿ ಪತ್ತೆಗೆ 17 ಮಂದಿ ಪರೀಕ್ಷೆ; ತಂದೆಯ ಡಿಎನ್‌ಎ ಮ್ಯಾಚ್
ಮುಂಬೈ: ಇಲ್ಲಿನ ಕೆಫೆ ಪರೇಡ್ ನೆರೆಹೊರೆಯಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20ರ ಯುವತಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ನಡೆದಿದೆ.
ಡಿಎನ್ಎ ಪರೀಕ್ಷೆಗಳು ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ ಯುವತಿಯ ತಂದೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊರಿಯನ್ ಹೆಸರಲ್ಲಿ ಅಕೌಂಟ್ ಸೃಷ್ಟಿಸಿ ಭಾರೀ ಫಾಲೋವರ್ಸ್ ಹೊಂದಿದ್ದ ಸಹೋದರಿಯರು
ಪೊಲೀಸರು ಮತ್ತೊಬ್ಬ ವ್ಯಕ್ತಿ ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿದ್ದರು. ಈ ಇಬ್ಬರೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಯುವತಿ ಗುರುತಿಸಿದ್ದರು. ಇತರರ ಪಾತ್ರಗಳಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
17 ಶಂಕಿತರ ಡಿಎನ್‌ಎ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಕೆಯ ತಂದೆಯ ಡಿಎನ್‌ಎ ಮ್ಯಾಚ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಯುವತಿ ನನಗೆ ಸುಸ್ತಾಗುತ್ತಿದೆ ಎಂದು ತನ್ನ ಅಜ್ಜಿ ಜೊತೆ ಹೇಳಿಕೊಂಡಿದ್ದಳು. ಕೈ ಸನ್ನೆ ಮೂಲಕ, ತನ್ನ ಹೊಟ್ಟೆಯಲ್ಲಿ ಏನೋ ತೆವಳಿದಂತೆ ಆಗುತ್ತಿದೆ ಎಂದು ತಿಳಿಸಿದ್ದಳು. ನಂತರ ಆಕೆಯನ್ನು ನಗರದ ಕ್ಯಾಮಾ & ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಐದು ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು.
ಪೊಲೀಸರು ಈ ವಿಚಾರವನ್ನು ಯುವತಿಯ ತಂದೆಗೆ ತಿಳಿಸಿದರು. ಆದರೆ, ಪುತ್ರಿ ಗರ್ಭಿಣಿಯಾಗಿರುವ ವಿಚಾರವನ್ನು ತಂದೆ ತಳ್ಳಿಹಾಕಿದರು. ದೂರು ದಾಖಲಿಸಲು ಸಹ ನಿರಾಕರಿಸಿದರು. ಕೊನೆಗೆ ಕೌನ್ಸಿಲಿಂಗ್ ಮಾಡಿದ ನಂತರ ದೂರು ದಾಖಲಿಸಲು ಯುವತಿ ಒಪ್ಪಿಕೊಂಡಳು. ಇದನ್ನೂ ಓದಿ: ಎಪ್‌ಸ್ಟೀನ್ ಜೊತೆ ಕಳೆದ ಪ್ರತಿ ನಿಮಿಷದ ಬಗ್ಗೆ ವಿಷಾದವಿದೆ – ಕ್ಷಮೆಯಾಚಿಸಿದ ಬಿಲ್ ಗೇಟ್ಸ್
ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಕೊನೆಗೆ ಯುವತಿಯ ತಂದೆ ಸೇರಿದಂತೆ 17 ಶಂಕಿತರಿಂದ ಡಿಎನ್ಎ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡು, ಅತ್ಯಾಚಾರಿಯ ಗುರುತು ಪತ್ತೆಗೆ ಭ್ರೂಣದಿಂದ ಬಂದ ಆನುವಂಶಿಕ ದತ್ತಾಂಶಗಳೊಂದಿಗೆ ಅವುಗಳನ್ನು ತಾಳೆಹಾಕಿ ನೋಡಿದರು. ಕೊನೆಗೆ ಸಂತ್ರಸ್ತೆಯ ತಂದೆಯ ಡಿಎನ್‌ಎ ಮ್ಯಾಚ್ ಆಗಿದೆ. ತಕ್ಷಣ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

