ನವದೆಹಲಿ: ಉದ್ಯಮಿಗಳಾದ ವಿಜಯ್ ಮಲ್ಯ (Vijay Malya) ಮತ್ತು ನೀರವ್ ಮೋದಿ (Nirav Modi) ಅವರ 15,000 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದು ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.
ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ (ವಿಜಯ್ ಮಲ್ಯಗೆ ಸೇರಿದ ಆಸ್ತಿ) ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮೊದಲಾದ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಶಕ್ಕೆ ಪಡೆದ ಒಟ್ಟು ಮೊತ್ತದಲ್ಲಿ ನೀರವ್ ಮೋದಿಗೆ ಸೇರಿದ 1,052 ಕೋಟಿ ಮತ್ತು ಚೋಕ್ಸಿ ಅವರ 2,565 ಕೋಟಿ ಹಣವನ್ನು ಒಳಗೊಂಡಿದೆ. ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ ಅಥವಾ ಎನ್‌ಎಸ್‌ಇಎಲ್‌ನಲ್ಲಿನ 17.5 ಕೋಟಿ ಮೊತ್ತವನ್ನು ಸೀಜ್ ಮಾಡಿದೆ.
ಅಕ್ರಮ ಹಣ ಪ್ರಕರಣಗಳಲ್ಲಿ 22,280 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಯಶಸ್ವಿಯಾಗಿ ಜಪ್ತಿ ಮಾಡಿದೆ. ನಾವು ಯಾರನ್ನೂ ಬಿಟ್ಟಿಲ್ಲ. ಅವರು ದೇಶ ಬಿಟ್ಟು ಓಡಿ ಹೋದರೂ ನಾವು ಅವರ ಹಿಂದೆ ಹೋಗಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ನಾವು ಯಾರನ್ನೂ ಬಿಟ್ಟಿಲ್ಲ ಎಂದು ಗುರುತಿಸುವುದು ಮುಖ್ಯ. ಬ್ಯಾಂಕ್‌ಗಳಿಗೆ ಹಿಂತಿರುಗಬೇಕಾದ ಹಣವನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಎಲ್ಲವನ್ನು ವಾಪಸ್ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.