ಬೆಂಗಳೂರು: ಅನಾದಿಕಾಲದಿಂದಲೂ ಇದ್ದ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮೆಟ್ರೋ ಕಾಮಗಾರಿಗೆ ಅಡ್ಡಿ ಬಂದ ಹಿನ್ನೆಲೆಯಲ್ಲಿ ಜನರ ವಿರೋಧದ ನಡುವೆಯೂ ಇಂದು ತೆರವುಗೊಳಿಸಿರುವ ಘಟನೆ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯ ಗಾರೇಬಾವಿಪಾಳ್ಯದಲ್ಲಿ ನಗರದಲ್ಲಿ ನಡೆದಿದೆ.
ಗಾರೇಬಾವಿಪಾಳ್ಯದಲ್ಲಿದ್ದ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತಾಧಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಿದ್ದರು. ಸದ್ಯ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗೆ ದೇವಸ್ಥಾನ ಅಡ್ಡಿ ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ದೇವಸ್ಥಾನ ತೆರವಿಗೆ ಸಾಕಷ್ಟು ಜನರು ಅಡ್ಡಿ ಪಡಿಸಿದ್ದರೂ ಸಹ ಫಲ ಸಿಗದೆ ಜೆಸಿಬಿಗಳ ಮೂಲಕ ಇಂದು ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿದರು.
ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ದೇವಸ್ಥಾನ ಅಡ್ಡಿ ಇದ್ದ ಕಾರಣ ಕೆಲವು ದಿನಗಳ ಹಿಂದೆ ದೇವಾಲಯ ಟ್ರಸ್ಟ್ ಹಾಗೂ ಊರಿನ ಮುಖಂಡರನ್ನು ಕರೆಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವಂತೆ ಸೂಚಿಸಿ ನೋಟಿಸ್ ಸಹ ನೀಡಿದ್ದರು. ಇಂದು ಅಧಿಕಾರಿಗಳ ತಂಡ ದೇವಸ್ಥಾನದಲ್ಲಿದ್ದ ವಿಗ್ರಹ ಹಾಗೂ ವಸ್ತುಗಳನ್ನು ಟ್ರಸ್ಟ್ ನವರಿಗೆ ಸ್ಥಳಾಂತರಿಸಿ ಬಳಿಕ ತೆರವುಗೊಳಿಸಿದರು.
ದೇವಸ್ಥಾನ ತೆರವು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಋಷಿಕುಮಾರ ಕಾಳಿ ಸ್ವಾಮಿಗಳು ಭೇಟಿ ನೀಡಿ ದೇವಸ್ಥಾನ ತೆರವಿಗೆ ಅಡ್ಡಿ ಪಡಿಸಿದರು. ಇನ್ನು ಕೆಲ ಜನರು ದೇವಾಲಯಕ್ಕೆ ಪರ್ಯಾಯ ವ್ಯವಸ್ಥೆ ಸಿಕ್ಕಿರುವುದರಿಂದ ತೆರವು ಕಾರ್ಯಚರಣೆಗೆ ಒಪ್ಪಿಗೆ ಸೂಚಿಸಿದ್ದರು. ಸದ್ಯ ಪೋಲಿಸರ ಭದ್ರತೆಯೊಂದಿಗೆ ದೇವಾಲಯ ತೆರವುಗೊಳಿಸಿದ್ದು, ಪಕ್ಕದಲ್ಲಿಯೇ ಮತ್ತೊಂದು ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ 1 ಕೋಟಿ ರೂ. ಹಣವನ್ನು ಬಿಎಂಆರ್ ಸಿಎಲ್ ನೀಡಿದೆ.