ದಾವಣಗೆರೆ: ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 150 ಶ್ವಾನಗಳ ಮಾರಣಹೋಮ ನಡೆದಿದೆ.
ಬೆಳಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 150 ಶ್ವಾನಗಳನ್ನ ಹಿಡಿದು ಸಾಯಿಸಿ ಮಣ್ಣು ಮಾಡಿದ್ದಾರೆ. ವಿಷಯ ತಿಳಿದ ನಂತರ ಪ್ರಾಣಿ ಹಿಂಸೆ ಕಾಯ್ದೆ ಅನ್ವಯ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದ ಪ್ರತಿನಿಧಿ ಹರೀಶ್ ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಲ್ಲದೇ ಅನಿಮಲ್ ವೆಲ್ಫೇರ್ ಬೋರ್ಡ್ ನ ಅನಿಮಲ್ ಆಫೀಸರ್ ಹರೀಶ್ ಹಾಗೂ ಅಧಿಕಾರಿಗಳ ತಂಡ ಬೆಳಗುತ್ತಿ ಗ್ರಾಮಕ್ಕೆ ಭೇಟಿ ನೀಡಿ ಮಣ್ಣಿನಲ್ಲಿ ಹೂತಿದ್ದ ಶ್ವಾನಗಳನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ.
ಶ್ವಾನಗಳನ್ನು ಹಿಡಿದು ಸಾಯಿಸುವುದು ಅಪರಾಧ. ಕೇವಲ ಶ್ವಾನಗಳನ್ನು ಹಿಡಿದು ಸಂತಾನಹರಣ ಮಾಡಬೇಕೇ ವಿನಃ ಕೊಲ್ಲುವಂತಿಲ್ಲ ಎಂದು ಸುಪ್ರೀಂ ತೀರ್ಪು ಇದ್ದರೂ ನೂರಾರು ನಾಯಿಗಳ ಮಾರಣಹೋಮ ನಡೆದಿರುವುದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ನೂರಾರು ಬೀದಿ ನಾಯಿಗಳನ್ನು ವಿಷವಿಕ್ಕಿ ಕೊಂದಿದ್ದರು. ಮತ್ತೆ ಈ ಘಟನೆ ಮರುಕಳಿಸಿದ್ದಕ್ಕೆ ಪ್ರಾಣಿ ಪ್ರಿಯರು ಆಕ್ರೋಶಗೊಂಡಿದ್ದಾರೆ.