ಕೇಪ್‌ಟೌನ್: ಪೂರ್ವ ಆಫ್ರಿಕಾದ (Africa) ಬುರುಂಡಿಯಲ್ಲಿ (Burundi) ಚಿನ್ನದ ಗಣಿ ಕುಸಿದು ಹದಿನೈದು ಕಾರ್ಮಿಕರು ಬಲಿಯಾಗಿದ್ದಾರೆ. ಸಿಬಿಟೋಕ್ ಪ್ರಾಂತ್ಯದ ಮಾಬಾಯಿ ಕಮ್ಯೂನ್‌ನಲ್ಲಿ ಈ ದುರಂತ ನಡೆದಿದೆ.
ಭಾರೀ ಮಳೆಯಿಂದಾಗಿ ಚಿನ್ನದ ಗಣಿಯಲ್ಲಿ (Gold Mine) ನೀರು ತುಂಬಿಕೊಂಡಿತ್ತು. ಕೆಲಸ ಮಾಡುತ್ತಿದ್ದಾಗ ಗಣಿ ಕುಸಿದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಇದನ್ನೂ ಓದಿ: ರಂಜಾನ್ ಸಂದರ್ಭ ಸಂಗೀತ ನಿಷೇಧ – ಅಫ್ಘಾನಿಸ್ತಾನದ ಮಹಿಳಾ ರೇಡಿಯೋ ಸ್ಟೇಷನ್ ಮುಚ್ಚಿದ ತಾಲಿಬಾನ್
ಮಳೆ ಕಾರಣಕ್ಕೆ ರುಗೊಗೊ ನದಿ ಉಕ್ಕಿ ಹರಿದು ಚಿನ್ನದ ಗಣಿಯಲ್ಲಿ ನೀರು ತುಂಬಿಕೊಂಡಿತ್ತು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕಾರ್ಮಿಕರು ಹೊಂಡಗಳಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಹೊರ ಕರೆತರುವಲ್ಲಿ ರಕ್ಷಣಾ ತಂಡಕ್ಕೆ ಸಾಧ್ಯವಾಗಿಲ್ಲ. ನಂತರ ಕಾರ್ಮಿಕರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಗಣಿಗಾರಿಕೆ ದುರಂತಗಳು ಬುರುಂಡಿಯ ವಾಯುವ್ಯ ಮತ್ತು ಈಶಾನ್ಯದಲ್ಲಿ ಆಗಾಗ್ಗೆ ವರದಿಯಾಗುತ್ತವೆ. ಅಲ್ಲಿ ಗಣಿಗಾರಿಕೆ ಮಾಡುವ ಜನರು ಅಧಿಕಾರಿಗಳ ಮೇಲ್ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರಾತ್ರಿ ವೇಳೆ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತದೆ. ಇದನ್ನೂ ಓದಿ: ಅಬ್ಬಾ..! ಇದೆಂಥಾ ಮೀನು? – ಡೆಡ್ಲಿ ಫಿಶ್ ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಪತಿ