ಉಡುಪಿ: ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಾಶಿ ರಾಶಿ ಗೋವಾ ಮದ್ಯ (Goa Liquor) ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ, ಅವಿನಾಶ್ ಮಲ್ಲಿ ಎಂಬವರಿಗೆ ಸಂಬಂಧಿಸಿದ ಎರಡು ಮನೆಗಳಿಂದ ಅಪಾರ ಮದ್ಯ ಜಪ್ತಿ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ 240 ಕ್ಕೂ ಅಧಿಕ ಬಾಕ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಾದಿಂದ ಅಕ್ರಮವಾಗಿ ತರಿಸಿಕೊಂಡಿರುವ ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಅವಿನಾಶ್ ಎಂಬಾತ ಮನೆಯಿಂದಲೇ ಲಿಕ್ಕರ್ ವ್ಯವಹಾರ ನಡೆಸುತ್ತಿದ್ದ.
ಅಬಕಾರಿ ಇಲಾಖೆ ಎಡಿಸಿ ಬಿಂದುಶ್ರೀ ಮಾತನಾಡಿ, ಒಟ್ಟು 15 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದೇವೆ. ಕಾರ್ಕಳ ತಾಲೂಕು ಬೋಳ ಗ್ರಾಮದ ಅಬ್ಯನಡ್ಕದಲ್ಲಿ ಕಾರ್ಯಾಚರಣೆಯಾಗಿದೆ. ಅವಿನಾಶ್ ಮಲ್ಲಿ ಮನೆಗೆ ದಾಳಿ ಮಾಡಿದ್ದೇವೆ. ಬರಿಮಾರು ಗುತ್ತು ಎಂಬ ಮನೆಗೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 272 ಪೆಟ್ಟಿಗೆ ಮದ್ಯ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ದಾಳಿಯಲ್ಲಿ ಒಟ್ಟು 2360.850 ಲೀಟರ್ ಮದ್ಯ ಜಪ್ತಿ ಮಾಡಿದ್ದೇವೆ. ವಿವಿಧ ಬ್ರ‍್ಯಾಂಡ್‌ಗಳ ಗೋವಾದ ಲಿಕ್ಕರ್‌ಗಳನ್ನು ಅಕ್ರಮ ದಾಸ್ತಾನು ಮಾಡಲಾಗಿತ್ತು. ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ, ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ.