ಉಡುಪಿ: ಹಲವು ದಿನಗಳಿಂದ ಕಾಟ ಕೊಡುತ್ತಿದ್ದ ಕಾಳಿಂಗನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕಾಗಿರುವ ಕಾರ್ಕಳದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಗ್ರಾಮಸ್ಥರ ನಿದ್ದೆಗೆಡಿಸಿತ್ತು.
ಈ ಅಪರೂಪದ ಕಾಳಿಂಗಸರ್ಪ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ಹಲವು ದಿನಗಳಿಂದ ಅಡ್ಡಾಡುತ್ತಿತ್ತು. ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೆ ಬಂದ ಭಾರೀ ಗಾತ್ರದ ಈ ಕಾಳಿಂಗ ಸರ್ಪವನ್ನು ಕೊನೆಗೂ ಸಂರಕ್ಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೋಳಿ ಗೂಡಿಗೆ ಬರುತ್ತಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಅವರ ಸಹಾಯ ಪಡೆದು ಸೆರೆ ಹಿಡಿಯಲಾಗಿದೆ.
ಸುಮಾರು 12 ಅಡಿ ಉದ್ದ 15 ಕೆ.ಜಿ ತೂಗುವ ಈ ಹಾವನ್ನು ಕುದುರೆಮುಖ ಅಭಯಾರಣ್ಯಕ್ಕೆ ಮತ್ತೆ ಬಿಡಲಾಗಿದೆ. ವಿಷಕಾರಿಯಾದ ಈ ಹಾವು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿಕೊಂಡು ನಾಡಿನ ಕಡೆ ಬರುತ್ತದೆ. ಈ ಕಾಳಿಂಗ ಸರ್ಪ ಕೂಡಾ ಆಹಾರವಿಲ್ಲದೆ ಸೊರಗಿದಂತೆ ಕಾಣಿಸುತ್ತಿದೆ ಎಂದು ಉರಗ ತಜ್ಞ ಪ್ರಭು ಹೇಳಿದ್ದಾರೆ.
ಈ ಗಾತ್ರದ ಕಾಳಿಂಗ ಸರ್ಪವು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸರೀಸೃಪವಾಗಿದೆ. ಕಾಳಿಂಗ ಸರ್ಪದ ರಕ್ಷಣೆಯೊಂದಿಗೆ ಕಡ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.