ಯಾದಗಿರಿ: ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ಧತಿ ಜೀವಂತವಾಗಿದೆ. ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಸ್ವಸಮಾಜದ ಬಾಂಧವರನ್ನೇ ಬಹಿಷ್ಕಾರ ಮಾಡಲಾಗಿದೆ. ಬಹಿಷ್ಕಾರದಿಂದ ಮದುವೆ, ವ್ಯಾಪಾರ, ವಹಿವಾಟು ಸೇರಿ ಅನೇಕ ಕಾರ್ಯ ಮಾಡದಂತಾಗಿದೆ. ಬಹಿಷ್ಕಾರಕ್ಕೊಳಗಾದ ಕುಟುಂಬಗಳೀಗ ಕಣ್ಣೀರು ಹಾಕುತ್ತಿವೆ.

ಹೌದು. ಇಂದಿನ ಎಐ ತಂತ್ರಜ್ಞಾನದ ಹೈಟೆಕ್ ಯುಗದಲ್ಲೂ ಸಮಾಜದಲ್ಲಿ ಇನ್ನೂ ಕೆಟ್ಟ ಪದ್ದತಿ ಜೀವಂತವಾಗಿದೆ. ಸ್ವಸಮಾಜದವರು ತಮ್ಮದೇ ಸಮಾಜದ ಬಾಂಧವರಿಗೆ ಬಹಿಷ್ಕಾರ ಹಾಕಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ 3,000 ಕ್ಕೂ ಹೆಚ್ಚು ಸ್ವಕುಳ ಸಾಳಿ ಸಮಾಜದ ಬಾಂಧವರು ವಾಸವಾಗಿದ್ದಾರೆ. ಸಮಾಜದ ಪ್ರತ್ಯೇಕ ಜೀವೇಶ್ವರ ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಕಟ್ಟಡಗಳಿವೆ. ಇದರ ವ್ಯವಹಾರದ ಬಗ್ಗೆ ಸ್ವಸಮಾಜದವರು ಲೆಕ್ಕ ಕೇಳುತ್ತಾ ಬಂದಿದ್ದಾರೆ. ಇದಕ್ಕೆ ಕೋಪಗೊಂಡು ಪ್ರಶ್ನೆ ಕೇಳಿದವರಿಗೆ ಹಲವಾರು ನೆಪಯೊಡ್ಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಸ್ವಕುಳ ಸಾಳಿ ಸಮಾಜದ 15 ಕ್ಕೂ ಹೆಚ್ಚು ಕುಟುಂಬಸ್ಥರಿಗೆ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರದಿಂದ ಕುಟುಂಬಸ್ಥರು ನೊಂದು ಹೋಗಿದ್ದಾರೆ. ಸಮಾಜದಲ್ಲಿ ಸೇರಿಸಿಕೊಳ್ಳುತ್ತಿಲ್ಲ. ಸಮಾಜದಿಂದ ದೂರ ಇಟ್ಟಿದ್ದಾರೆ. ಸಮಾಜದ ಕಾರ್ಯಕ್ರಮ, ಮದುವೆ, ಜಯಂತಿ ಕಾರ್ಯಕ್ರಮ, ಎಲ್ಲದಕ್ಕೂ ಬಹಿಷ್ಕಾರ ಹಾಕುವ ಕಾರ್ಯ ಕಳೆದ 8 ವರ್ಷಗಳಿಂದ ಮಾಡಲಾಗುತ್ತಿದೆ.

ಮದುವೆಗೆ ಹೆಣ್ಣು, ಗಂಡು ಕೊಡದಂತೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಮದುವೆ ಮಾಡಿಕೊಳ್ಳಲು ಆಗುತ್ತಿಲ್ಲ. ಬಹಿಷ್ಕಾರಕ್ಕೊಳಗಾದವರಿಗೆ ಶುಭ ಕಾರ್ಯಗಳಿಗೆ ಕಲ್ಯಾಣ ಮಂಟಪ ಕೊಡುತ್ತಿಲ್ಲವಂತೆ. ಸಮಾಜದ ಮುಖಂಡರಾದ ರಾಜಕುಮಾರ, ಮಲ್ಲು ಫಿರಂಗಿ, ಕೊಟ್ರೆಪ್ಪ ಸೇರಿ ಅನೇಕರು ಬಹಿಷ್ಕಾರ ಹಾಕಿದ್ದಾರೆ. ಇಂಥ ಕಾಲದಲ್ಲೂ ನಮ್ಮ ಶೋಚನಿಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಶಹಾಪುರ ತಹಶಿಲ್ದಾರ ಸಿದ್ಧಾರೂಡ ಅವರು ಮಾತನಾಡಿ, ಸದ್ಯಕ್ಕೆ ಗಮನಕ್ಕೆ ಬಂದಿದೆ. ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಹೇಳಲಾಗಿದೆ ಎಂದ್ರು.

