ಮೈಸೂರು: ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಎರಡನೇ ದಿನವಾದ ಇಂದು ಕಲ್ಯಾಣ ಸಂಭ್ರಮ ಮನೆ ಮಾಡಿತ್ತು.
ಬರೋಬ್ಬರಿ 145 ಜೋಡಿಯ ಸಾಮೂಹಿಕ ವಿವಾಹ ನೆರವೇರಿತು. ಸುತ್ತೂರು ಶ್ರೀ ಮಠ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಅಂಗವಿಕಲರು, ಅಂತರ್ಜಾತಿ, ವಿಧುರ- ವಿಧವೆ ಜೋಡಿ ಸತಿಪತಿಗಳಾದರು. 12 ಅಂತರ್ಜಾತಿ ಜೋಡಿ, 3 ಅಂಗವಿಕಲ ಜೋಡಿ, 3 ವಿಧುರ- ವಿಧವೆ ಜೋಡಿಗೆ ವಿವಾಹವಾಯಿತು.
ಜಾತಿ, ಬೇಧವಿಲ್ಲದೆ ಸಾಮೂಹಿಕ ವಿವಾಹ ನಡೆದಿದ್ದು, ಎಲ್ಲಾ ಜಾತಿಯ ಜನರು ಒಂದೆಡೆ ಸೇರಿದ್ದರು. ಎಲ್ಲಾ ಜಾತಿಯ ಜೋಡಿಗಳು ಒಂದು ವೇದಿಕೆಯಲ್ಲಿ ಸತಿ ಪತಿಗಳಾದರು. ಇದುವರೆಗೂ ಸುತ್ತೂರು ಜಾತ್ರೆಯಲ್ಲಿ ಒಟ್ಟು 2,464 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಾರಿಷಸ್ ಗಣರಾಜ್ಯದ ಉಪರಾಷ್ಟ್ರಪತಿ ಪರಮಶಿವ ಪಿಳ್ಳೈ, ಕನಕಪುರದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸೇರಿದಂತೆ ಪ್ರಮುಖರು ನವ ವಧುವರರಿಗೆ ಆಶೀರ್ವಾದಿಸಿದರು.