ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ, ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ 42 ಆರೋಪಿಗಳ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1.6 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ಮಾರತ್ ಹಳ್ಳಿ, ಮಹದೇವಪುರ, ಎಚ್‍ಎಎಲ್ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿ ಪೊಲೀಸರು 42 ಆರೋಪಿಗಳ ಬಂಧಿಸಿದ್ದು, ಬಂಧಿತರಿಂದ 140 ಬೈಕ್, 200 ಗ್ರಾಂ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಒಂದು ಕಾರು, ಟೆಂಪೋ ಸೇರಿದಂತೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಎಟಿಎಂಗೆ ಹಣ ಜಮೆ ಮಾಡಲು ಹೋಗಿ 52 ಲಕ್ಷ ಹಣ ದೋಚಿದ ಅಸಾಮಿ ಪರಮೇಶನನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಅಷ್ಟು ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ವಿಧಾನಸಭಾ ಎಲೆಕ್ಷನ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಭದ್ರತೆ ವಹಿಸಲಾಗಿದೆ. ನಗರದಲ್ಲಿ ಪರವಾನಿಗೆ ಪಡೆದಿರುವ 8000 ವೆಪನ್ಸ್ ಇದೆ. ಈಗಾಗಲೇ 1500 ವೆಪನ್ ಗಳನ್ನ ಡಿಪಾಸಿಟ್ ಮಾಡಲಾಗಿದೆ. ಉಳಿದವರು ಆಯಾ ಠಾಣಾ ವ್ಯಾಪ್ತಿಗಳಲ್ಲಿ ವೆಪನ್ ಗಳನ್ನ ಡೆಪಾಸಿಟ್ ಮಾಡಿ ಅವಶ್ಯಕತೆ ಇದ್ದಲ್ಲಿ ಡಿಸಿಪಿಗೆ ಲೇಟರ್ ನೀಡುವಂತೆ ಸೂಚನೆ ನೀಡಿದ್ದಾರೆ.