ಚೆನ್ನೈ: ತಮಿಳುನಾಡಿನ ಹದಿನಾಲ್ಕು ಮಂದಿ ಶಂಕಿತ ಉಗ್ರರು ದುಬೈನಲ್ಲಿ ಇದ್ದುಕೊಂಡು ಭಾರತದಲ್ಲಿ ಐಸಿಸ್‍ನ ಭಯೋತ್ಪಾದಕ ಸೆಲ್‍ಗಳನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರು ದುಬೈನಿಂದಲೇ ವಹಾದತ್-ಎ-ಇಸ್ಲಾಂ, ಜಮಾತ್ ವಹಾದತ್-ಇ-ಇಸ್ಲಾಂ ಅಲ್ ಜಿಹಾದಿಯೆ ಮತ್ತು ಜಿಹಾದಿ ಇಸ್ಲಾಮಿಕ್ ಘಟಕ ಸೇರಿದಂತೆ ವಿವಿಧ ಭಯೋತ್ಪಾದಕ ಗುಂಪುಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರನ್ನು ದುಬೈ ಪೊಲೀಸರು ಬಂಧಿಸಿ 6 ತಿಂಗಳು ಅಲ್ಲಿಯೇ ಜೈಲಿನಲ್ಲಿ ಇರಿಸಿ ಕಳೆದ ವಾರ ಭಾರತಕ್ಕೆ ಒಪ್ಪಿಸಿದ್ದರು.
Advertisement
Advertisement
ಸೋಮವಾರ ಆರೋಪಿಗಳನ್ನು ಎನ್‍ಐಎ ಚೆನ್ನೈ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿತ್ತು. ನ್ಯಾಯಾಲಯ ಜುಲೈ 25ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಈ 14 ಜನರಲ್ಲಿ ಹಲವರು ನಿರ್ವಹಣಾ ವೃತ್ತಿಪರರಾಗಿದ್ದು, ಇವರು ಯುಎಇಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರು ಮತ್ತು ಇವರಲ್ಲಿ ಒಬ್ಬ 32 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಎನ್‍ಐಎ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಸ್. ಪಿಳ್ಳೈ ಅವರು, “ಭಯೋತ್ಪಾದಕಾ ದಾಳಿ ನಡೆಸುವ ಸಲುವಾಗಿ ಅವರು ಉದ್ದೇಶಪೂರ್ವಕವಾಗಿಯೇ ಹಣವನ್ನು ಸಂಗ್ರಹಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಮೂಲಕ ಭಾರತದಲ್ಲಿ ಐಸಿಸ್ ಸಂಘಟನೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು” ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಅನ್ವಯ ಎನ್‍ಐಎ ನಾಗಪಟ್ಟಣಂನಲ್ಲಿ ಹರೀಶ್ ಮುಹಮ್ಮದ್ ಮತ್ತು ಹಸನ್ ಅಲಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಇದರಲ್ಲಿ ಹಸನ್ ಅಲಿ ಐಸಿಸ್ ಆಪರೇಟಿವ್ ಆಗಿದ್ದು, ಅವನು ಭಾರತದಲ್ಲಿ ದಾಳಿ ಮಾಡಲು ಜನರನ್ನು ನೇಮಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಹಸನ್ ಅಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ ಅವನು ವಾಹನಗಳನ್ನು ಸಾಧನಗಳಾಗಿ ಉಪಯೋಗಿಸಿ ಚಾಕು ಮತ್ತು ಸ್ಫೋಟಕವನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ತನ್ನ ಬೆಂಬಲಿಗರಲ್ಲಿ ಕೇಳಿಕೊಂಡಿದ್ದ. ಕಳೆದ ಕೆಲ ತಿಂಗಳುಗಳಿಂದ ಶಂಕಿತ ಐಸಿಸ್ ಗುಂಪುಗಳ ಮೇಲೆ ಕಣ್ಣಿಟ್ಟಿರುವ ಎನ್‍ಐಎ ಹಲವಾರು ಪ್ರಕರಣಗಳನ್ನು ಭೇದಿಸಿದೆ.
ಶ್ರೀಲಂಕಾದಲ್ಲಿ ನಡೆದ ಈಸ್ಟರ್ ದಾಳಿಯ ಹಿಂದೆ ಇದ್ದ ಆತ್ಮಾಹುತಿ ಬಾಂಬರ್‍ನೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಆರೋಪದ ಮೇಲೆ ಐದು ಜನರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.