– ಕಾಳಿಂಗಗಳು ನೀರಿನ ಮೂಲ ಹುಡುಕೋದ್ಯಾಕೆ? ಉರಗ ತಜ್ಞರು ಹೀಗಂತಾರೆ
ಕಾರವಾರ: ಬರದಿಂದಾಗಿ ಜನ ಕುಡಿಯುವ ನೀರಿಗೂ ಕಷ್ಟಪಡುತ್ತಿದ್ದಾರೆ. ಇದು ಕಾಡಿನಲ್ಲಿರುವ ಉರಗಗಳಿಗೂ ಭಿನ್ನವಾಗಿಲ್ಲ. ಹೀಗೆ ದಾಹದಿಂದ ಬಳಲಿ ಕಾಡಿನಿಂದ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪವೊಂದಕ್ಕೆ ನೀರು ಕುಡಿಸಿ ಕಾಡಿಗೆ ಬಿಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣೆ ಎಂಬ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಗ್ರಾಮದ ಮಾರುತಿ ಗೌಡ ಎಂಬವರ ಮನೆಗೆ ಆಗಮಿಸಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಹಾಗೂ ಮನೋಹರ್ ನಾಯಕ್ ರಕ್ಷಿಸಿದ್ದಾರೆ. ನೀರಿಲ್ಲದೇ ಬಳಲಿದ್ದ ಕಾಳಿಂಗಕ್ಕೆ ನೀರು ಕುಡಿಸಿ ಅರಣ್ಯ ಇಲಾಖೆಯವರ ಸಹಾಯದಿಂದ ಕಾಡಿಗೆ ಬಿಟ್ಟಿದ್ದಾರೆ.
Advertisement
Advertisement
ಇದೇನಿದು ಹಾವುಗಳು ನೀರು ಕುಡಿಯುತ್ತಾ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡಬಹುದು. ಹೌದು ಮನುಷ್ಯನಂತೆ ಹಾವಿಗೂ ಬಾಯಾರಿಕೆ ಆಗುತ್ತೆ ಅವುಗಳು ನೀರಿನ ಮೂಲ ಅರಸಿ ಕಿಲೋಮೀಟರ್ ಗಟ್ಟಲೆ ಓಡಾಡುತ್ತೆವೆ. ಅದರಲ್ಲೂ ಹೆಚ್ಚಾಗಿ ನಾಗರ ಹಾವು ಮತ್ತು ಕಾಳಿಂಗಗಳು ನೀರಿನ ಮೂಲ ಹುಡುಕುತ್ತವೆ ಅಂತಾರೆ ಉರಗ ತಜ್ಞರು.
Advertisement
ಹಾವುಗಳಿಗೂ ಬೇಕು ನೀರು: ಜನವರಿ ಯಿಂದ ಮಾರ್ಚ್ ವೇಳೆ ಹಾವುಗಳ ಮಿಲನದ ಸಮಯ. ಹೀಗಾಗಿ ಹೆಣ್ಣು ಕಾಳಿಂಗವನ್ನ ಹುಡುಕಿ ಕಾಡಿನಲ್ಲಿ ಗಂಡು ಕಾಳಿಂಗಗಳು ಅಲೆಯುತ್ತವೆ. ಈ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಬಾಯಾರಿಕೆಯಾಗಿ ನೀರನ್ನ ಅರಸಿ ತಂಪು ಜಾಗವನ್ನ ಹುಡುಕುತ್ತವೆ. ಇಂತಹ ಸಂದರ್ಭದಲ್ಲಿ ನೀರು ಸಿಗದಿದ್ದಾಗ ನಾಡಿಗೆ ಬಂದು ನೀರನ್ನ ಅರಸುತ್ತವೆ. ಹೆಚ್ಚಾಗಿ ಮನೆಯ ಸುತ್ತಮುತ್ತ ಚರಂಡಿಗಳಲ್ಲಿ ನೀರಿರುವುದರಿಂದ ಇದನ್ನ ಅವುಗಳು ಕುಡಿಯುತ್ತವೆ. ಬೇಸಿಗೆಯಲ್ಲಿ ಕಾಳಿಂಗ ಸರ್ಪಗಳು ಮನೆಗಳ ಆಸುಪಾಸು ಕಾಣುವುದು ಸಾಮಾನ್ಯವಾಗಿರುತ್ತದೆ ಎಂದು ಉರಗ ತಜ್ಞರು ಹೇಳುತ್ತಾರೆ.
Advertisement
ಉರಗ ತಜ್ಞರು ಹಾವನ್ನ ಹಿಡಿಯಲು ಬಂದಾಗ ಅದರ ದೈಹಿಕ ಸ್ಥಿತಿಯನ್ನ ಮೊದಲು ಗಮನಿಸುತ್ತಾರೆ. ಹೆಚ್ಚಾಗಿ ಈ ಸಂದರ್ಭದಲ್ಲಿ ಕಾಳಿಂಗಗಳು ಹೆಣ್ಣನ್ನು ಅರಸಿ ಬಂದಾಗ ಎರಡು ಗಂಡುಗಳ ಮಧ್ಯೆ ಮಹಾ ಕಾಳಗ ನಡೆಯುತ್ತದೆ. ಇದರಿಂದ ಒಂದು ಗಂಡು ಸೋತು ಪಲಾಯನ ಮಾಡುತ್ತೆ. ಇನ್ನು ಗೆದ್ದ ಮೊತ್ತೊಂದು ಗಂಡು ಕಾಳಿಂಗ ಹಾಗೂ ಹೆಣ್ಣು ಸರ್ಪದ ನಡುವೆ ಮಿಲನವಾಗುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ನಿತ್ರಾಣವಾಗಿ ನೀರನ್ನ ಬಯಸುತ್ತವೆ.
ಹಾವುಗಳು ಹತ್ತು ಮಿಲಿ ಲೀಟರ್ ನಿಂದ ಹಿಡಿದು ಅರ್ಧ ಲೀಟರ್ ವರೆಗೆ ನೀರನ್ನ ಅನಾಯಾಸವಾಗಿ ಕುಡಿಯುತ್ತವೆ. ಬೇಸಿಗೆಯ ದಿನಗಳಲ್ಲಿ ತಂಪಾಗಿರುವ ಪ್ರದೇಶಗಳನ್ನು ಅಂದರೆ ಬಿದಿರು ಮರಗಳು ಇರುವ ಸ್ಥಳಗಳಲ್ಲಿ ಉದುರಿದ ಎಲೆಗಳನ್ನು ಒಟ್ಟು ಮಾಡಿ ಮೊಟ್ಟೆಯಿಡುತ್ತವೆ. ಮನುಷ್ಯರು ಪ್ರಾಣಿಗಳ ವಾಸಸ್ಥಳವನ್ನು ಆಕ್ರಮಿಸುತ್ತಿರುವ ಕಾರಣ ಕಾಡಿನಿಂದ ನಾಡಿಗೆ ಬರುವುದು ಇತ್ತೀಚಿನ ದಿನಗಳಲ್ಲಿ ಸಾಮನ್ಯವಾಗಿದೆ.