ಚಿಕ್ಕಮಗಳೂರು: ತೋಟದಲ್ಲಿದ್ದ ಹಂಚಿನ ರಾಶಿಯಲ್ಲಿ ಆಶ್ರಯ ಪಡೆದಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಒಂದು ಗಂಟೆಯ ಕಾರ್ಯಚರಣೆ ಬಳಿಕ ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.
ಥಾಮಸ್ ಎಂಬವರ ತೋಟದ ಮನೆಯ ಹಂಚಿನ ರಾಶಿಯಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಕಾಳಿಂಗ ಸರ್ಪ ವಾಸವಿತ್ತು. ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಕಾಳಿಂಗ ಸರ್ಪವನ್ನು ನೋಡುತ್ತಿದ್ದರು.
ಆಗಾಗ ಹೊರ ಬರುತ್ತಿದ್ದ ಕಾಳಿಂಗ ಸರ್ಪವನ್ನು ಕಂಡು ಕೆಲಸಗಾರರು ಗಾಬರಿಗೊಂಡಿದ್ದರು. ಅಲ್ಲದೆ ತೋಟದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ತೋಟದ ಮಾಲೀಕ ಸ್ನೇಕ್ ಹರೀಂದ್ರಾಗೆ ವಿಷಯ ತಿಳಿಸಿದ್ದರು.
ಈ ವಿಷಯ ತಿಳಿದ ಸ್ಥಳಕ್ಕೆ ಬಂದ ಹರೀಂದ್ರ, ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಲ್ಲಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು, ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.