– ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಯಾದಗಿರಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ
ಯಾದಗಿರಿ: 14 ವರ್ಷ ಒಳಗಿನ ಮಕ್ಕಳನ್ನು ಕೂಲಿ ಕೆಲಸಕ್ಕೆಂದು ಹೊಲಕ್ಕೆ ಕರೆದುಕೊಂಡು ಹೋಗುವುದು ಅಪರಾಧ, ನಮ್ಮ ಜಿಲ್ಲೆಯಲ್ಲಿ ಇದು ಕಂಡು ಬಂದರೆ ಹೊಲದ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಉಪ ನಿರ್ದೇಶಕಿ ಕುಮಾರಿ ಶ್ವೇತಾ ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೆ ಇದೇ ವೇಳೆ ಪಬ್ಲಿಕ್ ಟಿವಿ ಅಭಿಯಾನಕ್ಕೆ ಅಭಿನಂದನೆ ಸಹ ತಿಳಿಸಿದರು.
ಕೊರೊನಾ ಲಾಕ್ ಡೌನ್ ಗೆ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಬಂದ್ ಆಗಿರುವ ಹಿನ್ನೆಲೆ, ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಬಿಟ್ಟು ಕೂಲಿ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ವಿದ್ಯಾಗಮ ಯೋಜನೆ ಸಹ ನಿಂತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪಾಲಕರು ಜಮೀನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಪಬ್ಲಿಕ್ ಟಿವಿ ಅಭಿಯಾನ ನಡೆಸಿತ್ತು.
Advertisement
Advertisement
ಇದೀಗ ಯಾದಗಿರಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕಡೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸುತ್ತಿದ್ದಾರೆ. ಅಲ್ಲದೆ ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಸಮಯವಿದ್ದು, 150 ರೂ. ಕೂಲಿ ಆಸೆಗೆ ಪಾಲಕರು ತಮ್ಮ ಮಕ್ಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸದ್ಯ ಇದಕ್ಕೆ ಬ್ರೇಕ್ ಹಾಕುತ್ತಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು, ಹೊಲದ ಮಾಲೀಕರ ವಿರುದ್ಧ ಕೇಸ್ ಹಾಕುತ್ತಿದ್ದಾರೆ.
Advertisement
Advertisement
ಈ ಪ್ರಕರಣಗಳನ್ನು ಯಾದಗಿರಿ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ಹೀಗಾಗಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ನಿರ್ದೇಶನದಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿ ಕುಮಾರಿ ಶ್ವೇತಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದೆ. ಕಾರ್ಮಿಕ ನಿರೀಕ್ಷಕ ಗಂಗಾಧರ್, ಮಕ್ಕಳ ರಕ್ಷಣಾಧಿಕಾರಿ ಗೋವಿಂದ ರಾಠೋಡ್ ಮತ್ತು ಅಶೋಕ್ ರಾಜನ್ ಈ ತಂಡದಲ್ಲಿದ್ದು, ಈ ತಂಡ ವಿವಿಧ ಕಡೆ ದಾಳಿ ನಡೆಸಿ ಮಕ್ಕಳ ರಕ್ಷಣೆ ಜೊತೆ ಜಮೀನಿನ ಮಾಲೀಕರ ವಿರುದ್ಧ ಎಫ್‍ಐಆರ್ ದಾಖಲಿಸುತ್ತಿದೆ.