ಇಸ್ಲಾಮಾಬಾದ್: ನಮ್ಮ (Pakistan) ದೇಶದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಇರಿಸಿಲ್ಲ. ಅವುಗಳೆಲ್ಲ ಭಾರತವನ್ನೇ ಗುರಿಯಾಗಿಸಿ ಇಡಲಾಗಿದೆ ಎಂದು ಭಾರತಕ್ಕೆ ಪಾಕ್ ಸಚಿವ ಹನೀಫ್ ಅಬ್ಬಾಸಿ (Hanif Abbasi) ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ.
ಪಾಕಿಸ್ತಾನದ ಶಸ್ತ್ರಾಗಾರದಲ್ಲಿ ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಭಾರತಕ್ಕಾಗಿ ಮಾತ್ರ ಇರಿಸಿದ್ದೇವೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ ನೀವು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಬುರುಡೆ ಬಿಟ್ಟಿದ್ದಾನೆ.
ನಾವು ದೇಶಾದ್ಯಂತ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಭಾರತದ ಮೇಲೆ ಗುರಿಯಾಗಿವೆ ಎಂದಿದ್ದಾನೆ.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ತೀವ್ರ ಅಡಚಣೆ ಉಂಟಾಗಿದೆ. ಇದು 10 ದಿನಗಳ ಕಾಲ ಹೀಗೆ ಮುಂದುವರೆದರೆ ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದಿದ್ದಾನೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಭಾರತವು ತನ್ನದೇ ಭದ್ರತಾ ವೈಫಲ್ಯಗಳನ್ನು ಒಪ್ಪಿಕೊಳ್ಳುವ ಬದಲು ಪಾಕಿಸ್ತಾನದ ಮೇಲೆ ಹೊಣೆ ಹೊರಿಸುತ್ತಿದೆ. ಅಲ್ಲದೇ ಭಾರತ ಎರಡು ದೇಶಗಳ ನಡುವಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಭಾರತ ತೆಗೆದುಕೊಳ್ಳುವ ಯಾವುದೇ ಕ್ರಮಗಳನ್ನು ಎದುರಿಸಲು ಪಾಕ್ ಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾನೆ.
ಏ.22ರಂದು ಉಗ್ರು ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ದಾಳಿಯ ನಂತರ ಭಾರತ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಇದರ ಭಾಗವಾಗಿ 1960 ರ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇಟ್ಟಿತ್ತು.