ಮುಂಬೈ: ಹೈದರಾಬಾದ್, ತೆಲಂಗಾಣಗಳಲ್ಲಿ ಇತ್ತೀಚೆಗೆ ನಡೆದ ಮರ್ಯಾದಾ ಹತ್ಯೆ ಹಾಗೂ ಕೊಲೆ ಯತ್ನ ಪ್ರಕರಣಗಳು ಸಂಭವಿಸಿ ಬೆರಳೆಣಿಕೆ ದಿನಗಳು ದಾಟಿಲ್ಲ. ಈಗ ಮಹಾರಾಷ್ಟ್ರದ ಗ್ರಾಮವೊಂದಲ್ಲಿ ಅಮಾಯಕ ಬಾಲಕರನ್ನು ಥಳಿಸಿ, ಬೆತ್ತಲಾಗಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಆಗಿದ್ದೇನು?:
13 ವರ್ಷದ ದಲಿತ ಬಾಲಕನೊಬ್ಬ ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ ಆತನನ್ನು ಥಳಿಸಿ, ಬೆತ್ತಲಾಗಿಸಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಕೊಲ್ಹಾಪುರ್‍ದ ಗ್ರಾಮವೊಂದರಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ಬಾಲಕ ಹಾಗೂ ಹಲ್ಲೆ ಮಾಡಿದ ಕುಟುಂಬದ ಬಾಲಕಿ ಇಬ್ಬರು ಪರಿಚಯಸ್ಥರು. ಹೀಗಾಗಿ ಕಳೆದ ತಿಂಗಳು ಶಾಲೆಯಿಂದ ಮನೆಗೆ ಮರಳುತ್ತಿದ್ದ ಆಕೆಗೆ ಬಾಲಕ ಚಾಕ್ಲೇಟ್ ನೀಡಿದ್ದಾನೆ. ಮನೆಗೆ ಹೋದ ಬಾಲಕಿ ಚಾಕ್ಲೇಟ್ ನೀಡಿದ ಕುರಿತು ಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣವೇ ಬಾಲಕಿಯನ್ನು ಮನೆಯವರು ಮುಂಬೈನಲ್ಲಿದ್ದ ಚಿಕ್ಕಪ್ಪನ ಮನೆಗೆ ಕಳುಹಿಸಿದ್ದರು.
ಈ ಕುರಿತು ಬಾಲಕಿ ಚಿಕ್ಕಪನಿಗೆ ಶುಕ್ರವಾರ ವಿಷಯ ಗೊತ್ತಾಗಿದ್ದು, ಕೆಲ ಸ್ನೇಹಿತರನ್ನು ಕರೆದುಕೊಂಡು ಬಾಲಕಿಯೊಂದಿಗೆ ಗ್ರಾಮಕ್ಕೆ ಮರಳಿದ್ದಾನೆ. ಶುಕ್ರವಾರ ಬಾಲಕನನ್ನು ಹಿಡಿದು, ಅವನ ಮನೆಯಲ್ಲಿ ಥಳಿಸಿದ್ದಾರೆ. ಬಳಿಕ ಬೆತ್ತಲೆ ಮಾಡಿ ಅವನ ಮನೆಯಿಂದ ಗ್ರಾಮ ಪಂಚಾಯತ್‍ವರೆಗೆ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯು ಬಾಲಕನ ಕುಟುಂಬದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರಕರಣ ತನಿಖೆ ಚುರುಕುಗೊಳಿಸಿರುವ ಕೊಲ್ಹಾಪುರ್ ಪೊಲೀಸರು, ಬಾಲಕಿಯ ಇಬ್ಬರು ಸಂಬಂಧಿಕರನ್ನು ಬಂಧಿಸಿದ್ದಾರೆ. ಇತ್ತ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಕಾಯ್ದೆ 1989 ಅಡಿ ಪ್ರಕರಣ ದಾಖಲಾಗಿದೆ.
ಘಟನೆಯಿಂದಾಗಿ ಗ್ರಾಮದಲ್ಲಿ ಎರಡೂ ಸಮುದಾಯಗಳ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹಲ್ಲೆಗೆ ಒಳಗಾದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv