ಬ್ಯಾಂಕಾಕ್: ಕಾರ್ ಎಂಜಿನ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.
ಕಾರಿನ ಚಾಲಕ ಟೀ ನಟ್ವಿಜಿತ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕಾರು ನಿಂತು ಹೋಗಿದೆ. ಆಗ ಕಾರಿಗೆ ಏನು ಸಮಸ್ಯೆಯಾಗಿರಬಹುದು ಎಂದು ಯೋಚಿಸುತ್ತಿದ್ದರು. ಆಗ ಕಾರಿನ ಬಾನೆಟ್ ನಲ್ಲಿ ಬೃಹತ್ ಆಕಾರದ ಹೆಬ್ಬಾವಿನ ಬಾಲ ಕಂಡು ಬಂದಿದ್ದು, ಅದನ್ನು ಜನ ನೋಡಿದ್ದಾರೆ.
ನಟ್ವಿಜಿತ್ ತನ್ನ ಕಾರಿನ ಮುಂಭಾಗದ ಬಾನೆಟ್ ತೆರೆದು ನೋಡಿದಾಗ ಅದರಲ್ಲಿ ಹೆಬ್ಬಾವು ಮಲಗಿದ್ದನ್ನು ನೋಡಿದ್ದಾರೆ. ನಂತರ ಕೂಡಲೇ ಸ್ಥಳೀಯ ಪ್ರಾಣಿ ನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಪ್ರಾಣಿ ನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಬಾನೆಟ್ ತೆಗೆದು ನೋಡಿದಾಗ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ. ಬಳಿಕ ಪ್ರಾಣಿ ನಿರ್ವಹಣಾಕಾರರು ಅದನ್ನು ಒಂದು ಹ್ಯಾಂಡ್ಲಿಂಗ್ ಸ್ಟಿಕ್ ಹಾಕಿ ಎಂಜಿನ್ ನಿಂದ ಹೊರಗೆ ತೆಗೆದಿದ್ದಾರೆ ಈ ಎಲ್ಲಾ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.
ಎಂಜಿನ್ ನಲ್ಲಿ ಅವಿತು ಮಲಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಳಿಕ ಅದನ್ನು ಒಂದು ಚೀಲದಲ್ಲಿ ತುಂಬಿ ಕಾಡಿಗೆ ಬಿಡಲಾಗಿದೆ ಎಂದು ಪ್ರಾಣಿ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ನಮ್ಮ ಮನೆಯಲ್ಲಿ ಇತ್ತೀಚಿಗೆ ಸಾಕಷ್ಟು ಕೋಳಿಗಳು ಒಂದೊಂದರಂತೆ ಕಾಣೆಯಾಗುತ್ತಿತ್ತು. ಬಹುಶಃ ಈ ಹಾವು ತಿಂದಿರಬಹುದು ಎಂದು ಕಾರ್ ಮಾಲೀಕರು ಆರೋಪಿಸಿದ್ದಾರೆ. ಆದರೆ ನಾನು ಹೆಬ್ಬಾವು ಇಲ್ಲಿರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಮಾಲೀಕ ಟೀ ಹೇಳಿದ್ದಾರೆ.
ಭಾರೀ ಮಳೆಯಾದಾಗ ಮತ್ತು ಹವಾಮಾನವು ತಂಪಾಗಿರುವಾಗ ಹಾವುಗಳು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತವೆ. ಅದೇ ರೀತಿ ಕಾರ್ ಎಂಜಿನ್ ನಲ್ಲಿ ಬಂದು ಮಲಗಿದೆ. ಆದರೆ ಜನರು ಕಾರನ್ನು ಚಲಾಯಿಸುವ ಮೊದಲು ಪರೀಕ್ಷಿಸಬೇಕು ಎಂದು ಪ್ರಾಣಿ ನಿರ್ವಹಣಾಧಿಕಾರಿ ಹೇಳಿದ್ದಾರೆ.