ಬೆಂಗಳೂರು: 62ನೇ ರಾಜ್ಯೋತ್ಸವ ಪ್ರಶಸ್ತಿಗೆ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಹಲವಾರು ಸಾಧಕರಿಂದ ಸುಮಾರು 1200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ನವೆಂಬರ್ 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಾರಿ 62 ನೇ ವರ್ಷದ ರಾಜ್ಯೋತ್ಸವ ಆಚರಣೆ ಇರುವುದರಿಂದ 62 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತೀರ್ಮಾನಿಸಿದೆ.
ಪ್ರಶಸ್ತಿ ಪುರಸ್ಕೃತರನ್ನ ಆಯ್ಕೆ ಮಾಡಲು ಸಚಿವೆ ಉಮಾಶ್ರೀ ಅವರ ಅಧ್ಯಕ್ಷತೆಯಲ್ಲಿ 13 ತಜ್ಞರ ಸಮಿತಿ ನೇಮಕ ಮಾಡಲಾಗಿದೆ. ಸಮಿತಿಯ ಮುಂದೆ ಪ್ರಶಸ್ತಿಗಾಗಿ 1200 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಅರ್ಜಿಗಳನ್ನ ನೋಡಿ ಪ್ರಶಸ್ತಿ ಆಯ್ಕೆ ಸಮಿತಿಯವರು ಸುಸ್ತಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವು ನವೆಂಬರ್ 1 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕದ ಮುಖ್ಯ ಮಂತ್ರಿಗಳು ಈ ಪ್ರಶಸ್ತಿಯನ್ನು ನೀಡುತ್ತಾರೆ. ರ್ಯಾಜೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ 20 ಗ್ರಾಂ ಚಿನ್ನದ ಪದಕದ ಜೊತೆಗೆ 1 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಸಮಿತಿಯ ಸದಸ್ಯರು: 2017ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಗಣ್ಯರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಲಹಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಉಮಾಶ್ರೀ ಹೇಳಿದ್ದಾರೆ. ಈ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಧ್ಯಕ್ಷರು, ಡಾ.ಲೀಲಾ ಅಪ್ಪಾಜಿ, ಡಾ.ಎಲ್.ಹನುಮಂತಯ್ಯ, ಪ.ಸ.ಕುಮಾರ್, ಪ್ರೋ. ಸಿಕೆ ನಾವಲಗಿ, ಕೆ.ಮುನಿಯಪ್ಪ, ಕೆ.ರಾಮಮೂರ್ತಿರಾವ್, ಶ್ರೀಮತಿ ಸುಭದ್ರಮ್ಮ ಮನ್ಸೂರ್, ಪ್ರೋ.ಕೆ.ಇ.ರಾಧಾಕೃಷ್ಣ, ಪ್ರೋ.ಜಿಕೆ.ವೀರೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು, ಶ್ರೀ ನರಸಿಂಹಲು ವಡಿವಟ್ಟಿ, ಶ್ರೀ ಮುರುಳಿ ಕಡೇಕರ್ ಹಾಗೂ ಶ್ರೀ ಬೋಳುವಾರು ಮಹಮ್ಮದ್ ಕುಂಞ ಇವರುಗಳನ್ನೊಳಗೊಂಡು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.