120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು

Public TV
2 Min Read
borewell

– ತಾಯಿ ಸೀರೆ ಬಿಚ್ಚಿ ಬಾವಿಯೊಳಗೆ ಕೊಟ್ರೂ ಮಗು ಉಳಿಲಿಲ್ಲ
– 25ಕ್ಕೂ ಅಧಿಕ ಸಿಬ್ಬಂದಿಯಿಂದ ಸತತ 12 ಗಂಟೆ ಕಾರ್ಯಾಚರಣೆ

ಹೈದರಾಬಾದ್: 120 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಮೂರು ವರ್ಷದ ಮಗುವನ್ನು ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಉಳಿಸಲು ಸಾಧ್ಯವಾಗದಿರುವ ಘಟನೆ ತೆಲಂಗಾಣದ ಮೆಡಕ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಾಯಿ ವರ್ಧನ್ ಎಂದು ಗುರುತಿಸಲಾಗಿದೆ. ವರ್ಧನ್ ಬುಧವಾರ ರಾತ್ರಿ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ್ದ ಬೋರ್‌ವೆಲ್‌ಗೆ ಬಿದ್ದಿದ್ದನು. ಮಾಹಿತಿ ತಿಳಿದು ತಕ್ಷಣ ಬಾಲಕನ ಪ್ರಾಣ ಉಳಿಸಲು ಅಧಿಕಾರಿಗಳು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

borewellt2

ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಗಿದೆ. ಬೋರ್‌ವೆಲ್‌ ಒಳಗೆ 17 ಅಡಿ ಆಳದಲ್ಲಿ ವರ್ಧನ್ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಿರಂತರ ರಕ್ಷಣಾ ಕಾರ್ಯಚರಣೆಯ ನಂತರವೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಬೋರ್‌ವೆಲ್‌ಗೆ ಬಾಲಕ ಬಿದ್ದ ತಕ್ಷಣ ಹೈದರಾಬಾದ್ ಮತ್ತು ಗುಂಟೂರಿನಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡದ 25ಕ್ಕೂ ಅಧಿಕ ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಬಾಲಕನ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಧರ್ಮ ರೆಡ್ಡಿ ತಿಳಿಸಿದರು.

2

ನಡೆದಿದ್ದೇನು?
ಇತ್ತೀಚೆಗೆ ವರ್ಧನ್ ತಾತ ಕೊಳವೆ ಬಾವಿಗಳನ್ನು ಕೊರೆಸಿದ್ದರು. ನೀರು ಸಿಗದಿದ್ದಾಗ ಬುಧವಾರ ಮತ್ತೊಂದು ಬೋರ್‌ವೆಲ್‌ ಕೊರೆಸಿದ್ದರು. ಅದರಲ್ಲಿಯೂ ನೀರು ಸಿಗಲಿಲ್ಲ. ಇದರಿಂದ ಬೇಸರಗೊಂಡು ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಟ್ಟುಬಿಟ್ಟರು. ಗದ್ದೆ ಪಕ್ಕದ ಮನೆಯಲ್ಲಿ ಸಾಯಿ ವರ್ಧನ್ ತಂದೆ ಮತ್ತು ತಾಯಿ ಮತ್ತಿಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ಬುಧವಾರ ಸಂಜೆ ಸುಮಾರು 5 ಗಂಟೆ ಜಿಲ್ಲೆಯ ಪಪನ್ನಪೇಟೆ ಮಂಡಲ್‍ದಲ್ಲಿರುವ ತೋಟದಲ್ಲಿ ಬಾಲಕ ತನ್ನ ಅಜ್ಜ ಮತ್ತು ತಂದೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಮಾಹಿತಿ ತಿಳಿದು ಎನ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ಬಂದು 120 ಅಡಿ ತೆರೆದ ಬೋರ್‌ವೆಲ್‌ಗೆ ಆಮ್ಲಜನಕ ಸರಬರಾಜು ಮಾಡಿದೆ. ಅಲ್ಲದೇ ಬಾಲಕನನ್ನು ರಕ್ಷಿಸಲು ಪಕ್ಕದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಆದರೆ ಬಾಲಕನಿಗೆ ಸರಿಯಾಗಿ ಆಮ್ಲಜನಕ ಸಿಗದೆ ಮೃತಪಟ್ಟಿದ್ದು, ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Capture 4

ಬಾಲಕ ಬೋರ್‌ವೆಲ್‌ಗೆ ಬಿದ್ದ ತಕ್ಷಣ ತಾಯಿ ತಾನು ಉಟ್ಟಿದ್ದ ಸೀರೆಯನ್ನು ಬಿಚ್ಚಿ ಕೊಳವೆ ಬಾವಿಯೊಳಗೆ ಇಳಿಸಿದ್ದಾರೆ. ಅದನ್ನು ಹಿಡಿದುಕೊಂಡು ಮಗು ಮೇಲಕ್ಕೆ ಬರಬಹುದು ಎಂದು ಪ್ರಯತ್ನಿಸಿದ್ದಾರೆ. ಆದರೆ ಬಾಲಕ ಬಾವಿಯೊಳಗೆ ಆಳದವರೆಗೆ ಹೋಗಿದ್ದು, ಸೀರೆಯನ್ನು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ.

ಸದ್ಯಕ್ಕೆ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮತಿಯಿಲ್ಲದೆ ಮೂರು ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ಆದರೆ ನೀರು ಸಿಗಲಿಲ್ಲ ಎಂದು ಅದನ್ನು ಮುಚ್ಚದ ಬಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *