ರಾಂಚಿ: ದೆಹಲಿಯಲ್ಲಿ ಅಫ್ತಾಬ್ ಪೂನಾವಾಲ ತನ್ನ ಗೆಳತಿ ಶ್ರದ್ಧಾ ವಾಕರ್‌ಳನ್ನು ಕೊಲೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿರುವ ಭೀಕರ ಕೃತ್ಯ ಬೆಳಕಿಗೆ ಬರುತ್ತಲೇ ಇಂತಹುದೇ ಹಲವು ಭೀಕರ ಹತ್ಯೆಗಳು (Murder) ದೇಶಾದ್ಯಂತ ವರದಿಯಾಗುತ್ತಿವೆ. ಇದೀಗ ಮತ್ತೊಂದು ಇಂತಹುದೇ ಅಪರಾಧ ಕೃತ್ಯ ಜಾರ್ಖಂಡ್‌ನಲ್ಲಿ (Jharkhand) ವರದಿಯಾಗಿದೆ.
ಬುಡಕಟ್ಟು ಮಹಿಳೆಯ (Woman) ದೇಹವನ್ನು 50ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿರುವ ಆರೋಪದ ಮೇಲೆ ಪೊಲೀಸರು ಮಹಿಳೆಯ ಪತಿಯನ್ನು (Husband) ಬಂಧಿಸಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಆರೋಪಿ ಹಾಗೂ ಕೊಲೆಯಾದ ಮಹಿಳೆ ಕಳೆದ 2 ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಇತ್ತೀಚೆಗಷ್ಟೇ ಮದುವೆಯಾಗಿದ್ದರು ಎಂಬುದು ತಿಳಿದುಬಂದಿದೆ. ಆರೋಪಿ ಪತ್ನಿಯನ್ನು ಕೊಂದ ಬಳಿಕ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಪತ್ನಿ ನಾಪತ್ತೆಯಾಗಿರುವ ದೂರನ್ನು ಪೊಲೀಸರಿಗೆ ನೀಡಿದ್ದಾನೆ.
ಶನಿವಾರ ಸಂಜೆ 6 ಗಂಟೆ ವೇಳೆಗೆ ಸಂತಾಲಿ ಮೊಮಿನ್ ಟೋಲಾ ಪ್ರದೇಶದ ಹಳೆಯ ಮನೆಯೊಂದರಲ್ಲಿ ಮಹಿಳೆಯ ಛಿದ್ರವಾದ ಶವ ಪತ್ತೆಯಾಗಿದೆ. ಬಳಿಕ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಭೀಕರವಾಗಿ ಹತ್ಯೆಯಾದ ಮಹಿಳೆಯನ್ನು ರೂಬಿಕಾ ಪಹಾಡಿನ್ (22) ಎಂದು ಗುರುತಿಸಲಾಗಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಘಟನೆ ಬೆಳಕಿಗೆ ಬರುವುದಕ್ಕೂ ಮುನ್ನ ಬೋರಿಯೋ ಅಂತಾಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿ ಮಾನವನ ಕಾಲು ಹಾಗೂ ದೇಹದ ಕೆಲವು ಭಾಗಳು ಪತ್ತೆಯಾಗಿತ್ತು. ಮಾಹಿತಿ ಪಡೆದ ಎಸ್‌ಪಿ ಅನುರಂಜನ್ ಕಿಸ್ಪೊಟ್ಟ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಶನಿವಾರ ಮಹಿಳೆಯ ಛಿದ್ರವಾದ ಮೃತದೇಹ ಹಳೆಯ ಮನೆಯೊಂದರಲ್ಲಿ ಪತ್ತೆಯಾದ ಬಳಿಕ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಹೋಗ್ಬೇಡ ಎಂದಿದ್ದಕ್ಕೆ ಚಿಕ್ಕಮ್ಮನ ಹತ್ಯೆ- ಬಕೆಟ್‌ನಲ್ಲಿ ದೇಹದ ಪೀಸ್‌ಗಳನ್ನಿಟ್ಟು ಎಸೆದ
ಮಹಿಳೆಯ ದೇಹದ 12 ತುಂಡರಿಸಿದ ಭಾಗಗಳು ಈಗ ಪತ್ತೆಯಾಗಿದ್ದು, ಇತರ ಭಾಗಗಳು ನಾಪತ್ತೆಯಾಗಿವೆ. ದೇಹದ ಉಳಿದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಮಹಿಳೆಯನ್ನು ಕೊಲೆ ಮಾಡಿರುವ ಆರೋಪದ ಮೇಲೆ ಆಕೆಯ ಪತಿ ದಿಲ್ದಾರ್ ಅನ್ಸಾರಿಯನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆ ಆತನಿಗೆ 2ನೇ ಪತ್ನಿ ಎನ್ನಲಾಗಿದೆ.
ಹತ್ಯೆಯಲ್ಲಿ ದಿಲ್ದಾರ್ ಅನ್ಸಾರಿ ಜೊತೆ ಇತರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳು ಎಲೆಕ್ಟ್ರಿಕ್ ಕಟರ್‌ನಂತಹ ಹರಿತವಾದ ವಸ್ತುಗಳನ್ನು ಬಳಸಿ ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಪಡೆಯಲು ಪತ್ನಿಗೆ HIV ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಭೂಪ