ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕುದುರೆಗುಂಡಿ ಸಮೀಪದಲ್ಲಿ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿಯಲಾಗಿದೆ.
ಕುದುರೆಗುಂಡಿ ಸಮೀಪದ ಚೇತನ್ ಜೈನ್ ಅವರ ಮನೆಯಲ್ಲಿ ಈ ಕಾಳಿಂಗ ಸರ್ಪವನ್ನ ಸೆರೆ ಹಿಡಿಯಲಾಗಿದೆ. ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಹಸುಗಳನ್ನ ಹೊರಗಡೆ ಕಟ್ಟಲು ಹೋದಾಗ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನ ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದರು. ತಕ್ಷಣ ಚೇತನ್ ಉರಗ ತಜ್ಞ ಹರೀಂದ್ರಗೆ ಫೋನ್ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಬರುವಂತೆ ಹೇಳಿದ್ದರು.
Advertisement
Advertisement
ಸ್ಥಳಕ್ಕೆ ಬಂದ ಹರೀಂದ್ರ ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪವನ್ನ ಹುಡುಕಿದ್ದಾರೆ. ಕೊಟ್ಟಿಗೆಯ ತೊಲೆಯ ಮೇಲೆ ಕಾಳಿಂಗ ಸರ್ಪ ಮಲಗಿತ್ತು. ನಂತರ ಕೆಳಗಿಳಿದ ಕಾಳಿಂಗ ಕೊಟ್ಟಿಗೆಯಲ್ಲಿ ಜೋಡಿಸಿದ್ದ ಕೃಷಿ ಸಾಮಾನುಗಳ ಮಧ್ಯೆ ಅವಿತುಕೊಂಡಿತು. ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಹರೀಂದ್ರ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಸದ್ಯ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳೊಂದಿಗೆ ತೆರಳಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವನ್ನು ಸೆರೆ ಹಿಡಿದ ಬಳಿಕ ಸ್ಥಳೀಯರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದ್ದು, ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದನ್ನು ಕಂಡು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.