ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಸಾಧುವೊಬ್ಬರು 4 ಗಂಟೆಯ ನಂತರ ಎದ್ದು ನಿಂತ ಚಮತ್ಕಾರ ನಡೆದಿದೆ.
ಕಾನ್ಪುರದ ರುಸೆಲ್ಲಾಬಾದ್ ತೆಹ್ಸಿಲ್ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮದಲ್ಲಿದ್ದ 115 ವರ್ಷದ ಸಾಧು ನಾರಾಯಣ ಬಾಬಾ ಸಾವನ್ನಪ್ಪಿದ್ದರು. ಈ ವೇಳೆ ಊರವರೆಲ್ಲಾ ಸೇರಿ ಅವರ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಮೃತಪಟ್ಟ ನಾಲ್ಕು ಗಂಟೆಯ ನಂತರ ಚಮತ್ಕಾರ ಎಂಬಂತೆ ಸಾಧುವಿನ ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಮುಖವಿಸ್ಮಿತರಾಗಿದ್ದಾರೆ.
ನಾರಾಯಣ ಬಾಬಾ ಕಳೆದ 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸಿಸಲು ಶುರು ಮಾಡಿದ್ದರು. ಅಲ್ಲದೆ ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಹಾಗೆಯೇ ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈಗ ಚಮತ್ಕಾರಿ ಸಾಧುವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬೇರೆ ಬೇರೆ ಊರುಗಳಿಂದಲೂ ಕೂಡ ಜನರು ಸಾಧುವಿನ ದರ್ಶನ ಪಡೆಯಲು ಬರುತ್ತಿದ್ದಾರೆ.