ಜೈಪುರ: 11 ಪಾಕ್ ಹಿಂದೂ ವಲಸಿಗರ ಮೃತದೇಹ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿವೆ. ಈ ಎಲ್ಲ 11 ಜನರು ಜೋಧಪುರ ನಗರದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಲೊಡ್ತಾ ಗ್ರಾಮದ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಇಬ್ಬರು ಪುರುಷರು, ನಾಲ್ವರು ಮಹಿಳೆಯರು ಮತ್ತು ಐದು ಮಕ್ಕಳು ಸಾವನ್ನಪ್ಪಿದ್ದಾರೆ.
11 ಜನರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಎಲ್ಲರ ಸಾವು ಆಗಿದೆ. ರಾತ್ರಿ ಕೆಮಿಕಲ್ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಘಟನಾ ಸ್ಥಳದಲ್ಲಿ ಅಂದ್ರೆ ಗುಡಿಸಲಿನಲ್ಲಿ ಕೆಲ ಕೆಮಿಕಲ್ ಬಾಟಲ್ ಗಳು ಲಭ್ಯವಾಗಿವೆ ಎಂದು ಎಸ್.ಪಿ. ರಾಹುಲ್ ಬಾರ್ತಾ ಹೇಳಿದ್ದಾರೆ.
ಮೃತರೆಲ್ಲರೂ ಬಿಹಲ್ ಸಮುದಾಯಕ್ಕೆ ಸೇರಿದವರಾಗಿದ್ದು, 2015ರಲ್ಲಿ ದೀರ್ಘಾವಧಿಯ ವೀಸಾ ಪಡೆದು ಪಾಕಿಸ್ತಾನ ಸಿಂಧ್ ಪ್ರಾಂತ್ಯದಿಂದ ರಾಜಸ್ಥಾನಕ್ಕೆ ಬಂದಿದ್ದರು. ಕಳೆದ ಆರು ತಿಂಗಳಿನಿಂದ ಲೋಡ್ತಾ ಗ್ರಾಮದಲ್ಲಿ ವಾಸವಾಗಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು.
ಶನಿವಾರ ರಾತ್ರಿ ಈ 11 ಜನರ ನಡುವೆ ಗಲಾಟೆ ನಡೆದಿರಬಹುದು. ಹಾಗಾಗಿ ಎಲ್ಲರೂ ಸಾಮೂಹಿಕ ಆತ್ಮಹತ್ಯೆ ಶರಣಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಲ್ಲ ಶವಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ಲಭ್ಯವಾಗಿರು ರಾಸಾಯನಿಕ ಮಾದರಿಯನ್ನು ಫೊರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ರಾಹುಲ್ ಬಾರ್ತಾ ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ 9 ಗಂಟೆಗೆ ಎಲ್ಲರೂ ಊಟ ಮಾಡಿದ್ರು. ನಾನು 10 ಗಂಟೆಗೆ ಬೆಳೆಯ ಕಾವಲು ಕಾಯುದಕ್ಕಾಗಿ ತೋಟಕ್ಕೆ ಹೋದೆ. ಬೆಳಗ್ಗೆ ಬರೋಷ್ಟರಲ್ಲಿ ಎಲ್ಲರೂ ಸಾವನ್ನಪ್ಪಿದ್ರು, ಕೂಡಲೇ ಸಂಬಂಧಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಆತ ಕೆಲ ಗ್ರಾಮಸ್ಥರೊಂದಿಗೆ ಬಂದನು. ಹಾಗೆ ಪೊಲೀಸರಿಸಗೂ ವಿಷಯ ತಿಳಿಸಲಾಯ್ತು ಎಂದು ಈ ಜನರೊಂದಿಗೆ ವಾಸವಾಗಿದ್ದ ಕೆವಲ್ ರಾಮ್ ಹೇಳಿದ್ದಾರೆ.