-ಬಿಎಸ್ಸಿ ನರ್ಸಿಂಗ್ ತರಬೇತಿಗೆ ಮುಂಬೈಗೆ ತೆರಳಿದ್ದ ಯುವತಿಗೂ ಸೋಂಕು
ಹಾವೇರಿ: ಜಿಲ್ಲೆಯಲ್ಲಿ 11 ದಿನಗಳ ಬಳಿಕ ಮೂವರಿಗೆ ಮಹಾಮಾರಿ ಕೊರೊನಾ ಸೋಂಕು ವಕ್ಕರಿಸಿದೆ.
ಜಿಲ್ಲೆಯ ಸವಣೂರು ತಾಲೂಕಿನ ಯಲವಗಿ ಗ್ರಾಮದ 28 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ. ಬಿಎಸ್ಸಿ ನರ್ಸಿಂಗ್ ಮುಗಿಸಿರುವ ಯುವತಿ (ರೋಗಿ ಸಂಖ್ಯೆ-1690) ಮುಂಬೈಗೆ ಸಮುದಾಯ ಆರೋಗ್ಯಾಧಿಕಾರಿ (ಸಿಎಚ್‍ಒ) ತರಬೇತಿಗೆ ತೆರಳಿ ವಾಪಸ್ ಆಗಿದ್ದರು. ಮೇ 19 ರಂದು ಊರಿಗೆ ವಾಪಸ್ ಆಗಿದ್ದ ಯುವತಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಮೇ 19 ರಂದು ಕ್ವಾರಂಟೈನ್ ನಲ್ಲಿದ್ದ ಯುವತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಯುವತಿಗೆ ಕೊರೊನಾ ಸೋಂಕು ದೃಢವಾಗಿದೆ.
ಬಂಕಾಪುರ ಪಟ್ಟಣದ 22 ವರ್ಷದ (ರೋಗಿ ಸಂಖ್ಯೆ 1691) ಲಾರಿ ಚಾಲಕನಲ್ಲಿ ಸೋಂಕು ಪತ್ತೆಯಾಗಿದೆ. ಮೇ 5ರಿಂದ ಮೇ 12 ರವರೆಗೆ ಮೂರು ಬಾರಿ ಮಾವಿನ ಹಣ್ಣು ಮಾರಾಟಕ್ಕೆ ಯುವಕ ಮುಂಬೈ ಭೇಟಿ ನೀಡಿದ್ದ. ಸದ್ಯ ಸೋಂಕಿತ ವ್ಯಕ್ತಿ ಮೆಣಸಿನಕಾಯಿ ತೆಗೆದುಕೊಂಡು ಬೆಂಗಳೂರಿಗೆ ಆಗಮಿಸಿರುವ ಮಾಹಿತಿ ಲಭಿಸಿದೆ.
ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರದ ಝೋನ್ಲ್ ಲ್ಲಿದ್ದ (ರೋಗಿ ಸಂಖ್ಯೆ 1689) 55 ವರ್ಷದ ವೃದ್ಧೆಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಮೊದಲ ಎರಡು ಪ್ರಕರಣಗಳಾದ ರೋಗಿ ಸಂಖ್ಯೆ 639 ಮತ್ತು 672ರ ಪ್ರದೇಶದಲ್ಲಿ ವೃದ್ಧೆ ವಾಸಿಸುತ್ತಿದ್ದರು. ಇದರೊಂದಿಗೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6ಕ್ಕೇರಿದ್ದು, ಸೋಂಕಿತರು ವಾಸವಿರುವ ಪ್ರದೇಶ ಸೀಲ್‍ಡೌನ್ ಮಾಡಲಾಗಿದೆ. ಉಳಿದಂತೆ ಸುತ್ತಮುತ್ತಲಿನ 7 ಕಿಲೋ ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.