ಕಾರವಾರ: ರಾಜ್ಯದಲ್ಲಿ 108 ಅಂಬುಲೆನ್ಸ್ (108 Ambulance) ಸೇವೆಯಲ್ಲಿ ಸಮಸ್ಯೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಭರವಸೆ ನೀಡಿದ್ದಾರೆ.
ಈ ಕುರಿತು ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ಅಂಬುಲೆನ್ಸ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಮುಂದುವರಿದ ರಾಷ್ಟ್ರಗಳಲ್ಲಿನ ಸೇವೆಗಳ ಬಗ್ಗೆ ವರದಿ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: RSS ಸಂಘಟನೆಗೆ ನಾವು ಅವಕಾಶ ಕೊಟ್ಟಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ
Advertisement
Advertisement
108 ತುರ್ತು ಅಂಬುಲೆನ್ಸ್ ಸೇವೆ 2006-07ರಲ್ಲಿ ಪ್ರಾರಂಭವಾಯಿತು. ಸತ್ಯಂ ಅನ್ನುವ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿತ್ತು. ಆದರೆ ಆಗ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಅಂದು ಯಾವುದೇ ಸಮಸ್ಯೆ ಇರಲಿಲ್ಲ. ಕಂಪನಿ ಲಾಸ್ ಆದ ಬಳಿಕ ಜಿವಿಕೆ (GVK) ಸಂಸ್ಥೆಗೆ ನಿರ್ವಹಣೆಗೆ ವಹಿಸಿಕೊಟ್ಟಿತ್ತು. ಮೊದ ಮೊದಲು ಸರಿಯಾಗಿ ನಡೆಸುತ್ತಿದ್ದ ಸಂಸ್ಥೆ ಇತ್ತೀಚೆಗೆ ಸೇವೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ
Advertisement
Advertisement
ಈಗಾಗಲೇ ಮುಂದುವರಿದ ದೇಶಗಳಲ್ಲಿ ಯಾವ ರೀತಿ ವ್ಯವಸ್ಥೆಯಿದೆ ಎಂಬುದರ ಬಗ್ಗೆ ತಿಳಿದು ಸರ್ಕಾರಕ್ಕೆ ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ (Technical Committee) ರಚನೆ ಮಾಡಲಾಗಿದೆ. ಸಮಿತಿ ನೀಡಿದ ವರದಿ ಆಧರಿಸಿ ಟೆಂಡರ್ ಕರೆಯಲಾಗುತ್ತದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಸರ್ಕಾರ ಈಗ ಎಲ್ಲರಿಗೂ ವೇತನ ನೀಡಿದೆ. ಇನ್ನೂ ಒಂದೂವರೆ – ಎರಡು ತಿಂಗಳಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.