ಗಾಂಧಿನಗರ: ಪ್ರೇಮಿಗಳ ದಿನದಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ.
ಯುವಕ, ಯುವತಿಯರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಲಾಫ್ಟರ್ ಥೆರಪಿಸ್ಟ್ ಕಮಲೇಶ್ ಮಸಾಲಾವಾಲಾ ನಡೆಸುತ್ತಿರುವ ಹಾಸ್ಯಮೇವ ಜಯತೆ ಎಂಬ ಸ್ವಯಂಪ್ರೇರಿತ ಸಂಘಟನೆ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸೂರತ್‍ನ ಸುಮಾರು 15 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲಿ ತಾವು ಪ್ರೇಮ ವಿವಾಹವಾಗಲ್ಲ ಎಂದು ಪ್ರಮಾಣ ಮಾಡಲು ಮುಂದಾಗಿದ್ದು, ಸಂಸ್ಕಾರ ಭಾರತಿ, ಪ್ರೆಸಿಡೆನ್ಸಿ ಹೈಸ್ಕೂಲ್ ಸೇರಿ 15 ಶಾಲೆಗಳಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಮಾಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾರ್ಯಕ್ರಮ ಆಯೋಜಕರು, “ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುತ್ತಾರೆ ಅಲ್ಲದೆ ತಾವು ಪ್ರೀತಿಸಿದವರನ್ನೇ ಮದುವೆಯಾಗುವ ದೃಢ ನಿರ್ಧಾರ ಮಾಡುತ್ತಾರೆ. ಆದರಲ್ಲಿ ಮನೆಬಿಟ್ಟು ಓಡಿ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮದುವೆಯಾದವರ ಸಂಬಂಧ ಬೇಗನೇ ಮುರಿದುಬೀಳುತ್ತವೆ. ಇಂತಹ ನಿರ್ಧಾರ ಮಾಡುವಾಗ ಪೋಷಕರ ಸಲಹೆ ಅವಶ್ಯಕ ಎಂಬ ಸಂದೇಶ ನೀಡಲು ಈ ಹೊಸ ಕಾರ್ಯಕ್ರಮವನ್ನು ನಡೆಸಲು ಹೊರಟಿದ್ದೇವೆ” ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಹ ಆಯೋಜಕರಾಗಿರುವ ಕವಿ ಮುಕುಲ್ ಛೋಕ್ಸಿ ಮಾತನಾಡಿ, “ಹಲವು ಯುವಕರು ಪೋಷಕರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗುತ್ತಾರೆ. ಯಾಕೆ ಪೋಷಕರು ತಮ್ಮ ಮಕ್ಕಳ ಪ್ರೀತಿಯನ್ನು ವಿರೋಧಿಸುತ್ತಾರೆ ಎಂದು ಯುವಕರಿಗೆ ತಿಳಿದಿರೋದಿಲ್ಲ. ಹೀಗಾಗಿ ಈ ರೀತಿ ಪ್ರಮಾಣ ಮಾಡಿದಾಗ ತಮ್ಮ ಪೋಷಕರ ಭಾವನೆಗಳಿಗೆ ಗೌರವ ಕೊಡಲು ಯುವಕರು ನಿರ್ಧಾರ ಮಾಡುತ್ತಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಪೋಷಕರಿಗೋಸ್ಕರ ನಾವು ಈ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮಾಡಿರುವಷ್ಟು ತ್ಯಾಗ ಈ ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಹೀಗಾಗಿ ಅವರ ನಿರ್ಧಾರಗಳಿಗೆ ನಾವು ಗೌರವ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv