ನವದೆಹಲಿ: ಗಣರಾಜ್ಯೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ 1,000 ಮೇಡ್ ಇನ್ ಇಂಡಿಯಾ ಡ್ರೋನ್‍ಗಳು ಆಕಾಶವನ್ನು ಬೆಳಗಿದವು.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಬಲಿತ ಬೋಟ್‍ಲ್ಯಾಬ್ ಡೈನಾಮಿಕ್ಸ್ ಎಂಬ ಸ್ಟಾರ್ಟ್ ಅಪ್‍ನಿಂದ ಇದೇ ಮೊದಲ ಬಾರಿ ಡ್ರೋನ್ ಮೂಲಕ ಲೇಸರ್ ಶೋ ಅನ್ನು ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಪ್ರದರ್ಶನಗೊಳಿಸಲಾಯಿತು.
ಗಣರಾಜ್ಯೋತ್ಸವದ ಕೊನೆಯ ಭಾಗವಾಗಿ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನದ ಸಂದರ್ಭದಲ್ಲಿ ಪ್ರಾರಂಭವಾಗಿದೆ. ಶನಿವಾರ ನಡೆದ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಇತರ ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: 3 ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಕರ್ತವ್ಯಕ್ಕೆ ಅನ್‌ಫಿಟ್ – ಟೀಕೆ ಬೆನ್ನಲ್ಲೇ ಮಾರ್ಗಸೂಚಿ ಹಿಂಪಡೆದ SBI
ಬೀಟಿಂಗ್ ರಿಟ್ರೀಟ್ ಸಮಾರಂಭಲ್ಲಿ 1,000 ಡ್ರೋನ್‍ಗಳು ಆಕಾಶದಲ್ಲಿ ಬೆಳಗುತ್ತಿರುವುದು ಹೆಮ್ಮೆಯ ವಿಷಯ. ಯುಕೆ, ರಷ್ಯಾ ಮತ್ತು ಚೀನಾ ನಂತರ ಭಾರತ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡುತ್ತಿರುವ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂಬುದನ್ನು ಹೇಳಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಹಿಂದೆ ಹೇಳಿದ್ದರು. ಇದನ್ನೂ ಓದಿ: ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ರಹಸ್ಯವಲ್ಲ: ಪ್ರಧಾನಿ ಪತ್ರ ಸ್ವೀಕರಿಸಿದ ಬ್ರೆಟ್ ಲೀ
ಏನು ಈ ಬೀಟಿಂಗ್ ರಿಟ್ರೀಟ್ ಸಮಾರಂಭ?
ಬೀಟಿಂಗ್ ರಿಟ್ರೀಟ್ ಸಮಾರಂಭ ಶತಮಾನಗಳಷ್ಟು ಹಳೆಯ ಮಿಲಿಟರಿ ಸಂಪ್ರದಾಯವಾಗಿದೆ. ಈ ಸಮಾರಂಭ ದೆಹಲಿಯ ವಿಜಯ್ ಚೌಕ್‍ನಲ್ಲಿ ಪ್ರತಿ ವರ್ಷ ನಡೆಯುತ್ತದೆ.
ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬ್ಯಾಂಡ್‍ಗಳು ಈ ಸಮಾರಂಭದಲ್ಲಿ ಸಂಗೀತ ನುಡಿಸುತ್ತವೆ. ವೀರ್ ಸೈನಿಕ್ ರಾಗ, ಪೈಪ್ಸ್ ಹಾಗೂ ಡ್ರಮ್ಸ್ ಬ್ಯಾಂಡ್, ಸಿಎಪಿಎಫ್ ಬ್ಯಾಂಡ್, ಏರ್ ಫೋರ್ಸ್ ಬ್ಯಾಂಡ್, ಆರ್ಮಿ ಮಿಲಿಟರಿ ಬ್ಯಾಂಡ್ ಹಾಗೂ ಮಾಸ್ಡ್ ಬ್ಯಾಂಡ್‍ಗಳನ್ನು ನುಡಿಸಲಾಗಿದೆ.