ಹಾಸನ: ಹಾಸನಾಂಬೆ (Hasanamba) ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪರದಾಡುವಂತಾಗಿದೆ. ಜನರನ್ನು ನಿಯಂತ್ರಿಸಲು ಒಂದು ದಿನದ ಹಿಂದೆಯಷ್ಟೇ ರದ್ದು ಮಾಡಿದ್ದ ಪಾಸ್ ಮಾರಾಟ ಪ್ರಕ್ರಿಯೆಗೆ ಶುಕ್ರವಾರ ಮರುಚಾಲನೆ ನೀಡಲಾಗಿದೆ. 1,000 ರೂ. ಹಾಗೂ 300 ರೂ. ಪಾಸ್ ಮಾರಾಟಕ್ಕೆ ಮರುಚಾಲನೆ ನೀಡಲಾಗಿದೆ.
ಈ ಮೊದಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವವರಿಗೆ ಮಾತ್ರ ಅವಕಾಶ ಎಂದಿದ್ದ ಆಡಳಿತಾಧಿಕಾರಿ ಯೂಟರ್ನ್ ಹೊಡೆದಿದ್ದಾರೆ. ಆದೇಶ ರದ್ದು ಮಾಡಿದ ಮರುದಿನವೇ ಆಫ್‌ಲೈನ್ ಟಿಕೆಟ್ ಕೌಂಟರ್‌ಗೆ ಚಾಲನೆ ನೀಡಿದ್ದಾರೆ. ಗುರುವಾರ ತಡರಾತ್ರಿಯಿಂದಲೇ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಟಿಕೆಟ್ ಮಾರಾಟದಿಂದಲೇ 7 ಕೋಟಿಗೂ ಅಧಿಕ ಆದಾಯ ಗಳಿಸಿರುವ ಜಿಲ್ಲಾಡಳಿತ, ದಾಖಲೆ ಮಟ್ಟದ ಹಣ ಕ್ರೂಢೀಕರಣಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು
ಹಾಸನಾಂಬೆ ಸನ್ನಿಧಿಯಲ್ಲೇ ಬಡಿದಾಟ:
ಹಾಸನಾಂಬ ದೇವಸ್ಥಾನ ಇವತ್ತು ಅಕ್ಷರಶಃ ರಣಾಂಗಣವಾಗಿತ್ತು. ದೇಗುಲದ ಬಳಿ ಮತ್ತೆ ಮಾರಾಮಾರಿಯಾಗಿತ್ತು. ಕುಟುಂಬದವರನ್ನು ದೇವಾಲಯಕ್ಕೆ ಕರೆದೊಯ್ಯುವ ವಿಚಾರಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಜಟಾಪಟಿ ಸಹ ನಡೆದಿದೆ. ಕುಟುಂಬದವರನ್ನು ಕರೆತಂದಿದ್ದಕ್ಕೆ ಮತ್ತೋರ್ವ ಸಿಬ್ಬಂದಿ ತಡೆದಿದ್ರು, ಇದರಿಂದ ಸಿಟ್ಟಿಗೆದ್ದು ಇಬ್ಬರು ಫ್ಯಾಮಿಲಿ ಎದುರೇ ಬಡಿದಾಡಿಕೊಂಡ್ರು. ಜಗಳ ಬಿಡಿಸಲು ಪೊಲೀಸರು ಪತರುಗುಟ್ಟಿ ಹೋಗಿದ್ದಾರೆ.
ಇನ್ನೂ, ಈ ಫೈಟ್ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲಾ ರೀತಿಯಾ ಪಾಸ್‌ಗಳನ್ನು ರದ್ದು ಮಾಡಲಾಗಿದೆ ಅಂದಿದ್ದಾರೆ. ಅದ್ಯಾವಾಗ ಈ ಪಾಸ್ ಕ್ಯಾನ್ಸಲ್ ಅಂದ್ರೋ ಇಡೀ ಭಕ್ತಗಣವೇ ನಿಗಿನಿಗಿ ಕೆಂಡವಾಗಿದ್ರು. ದೇವಾಲಯದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಬಾರಿ ಆಗಿರುವ ಅವ್ಯವಸ್ಥೆ ನಿಜಕ್ಕೂ ಸಮಸ್ಯೆ ತಂದಿದೆ. ಅಧಿಕಾರಿಗಳು ಎಲ್ಲಿದ್ದಾರೋ ಎಂದು ಮಹಿಳೆಯರು ಕಿಡಿಕಾರಿದ್ರು. ಇತ್ತ ಕೆನಾಡದಿಂದ ದೇವಿ ದರ್ಶನಕ್ಕೆ ಬಂದಿದ್ದ ಯುವತಿ ಕೂಡ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್ ಮಾರಾಟ ರದ್ದು
ಹಾಸನಾಂಬೆ ದರ್ಶನ ಅವ್ಯವಸ್ಥೆಗೆ ರೇವಣ್ಣ ಕೆಂಡ:
ಪಾಸ್ ರದ್ದು ಸಂಬಂಧ ಮಾಜಿ ಸಚಿವ ರೇವಣ್ಣ ಕೂಡ ಕೆಂಡಾಮಂಡಲರಾಗಿದ್ದರು. ಎರಡೂವರೆ ಲಕ್ಷ ವಿಐಪಿ ಪಾಸ್ ಯಾಕೆ ಕೊಟ್ರಿ? ನಾವ್ಯಾರು ಪಾಸ್ ಕೊಡಿಸಿ ಅಂತ ಕೇಳಿಲ್ಲ. ನಂದು ದೇವಸ್ಥಾನ ಅಂತ ಡಿಸಿ ಹೇಳಿದ್ರೆ ನಾನ್ಯಾಕೆ ಬರಲಿ? ಡಿಸಿ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಅಂತೇಳಿ ಡಿಸಿ ಸತ್ಯಭಾಮಾ ವಿರುದ್ಧ ರೇವಣ್ಣ ಸಿಟ್ಟು ಹೊರ ಹಾಕಿದ್ರು.
ಕ್ಷಣಕ್ಷಣಕ್ಕೂ ಹಾಸನಾಂಬೆ ದೇವಸ್ಥಾನದ ಆವರಣದಲ್ಲಿ ಭಕ್ತರ ಕಿಚ್ಚು ಜೋರಾಗಿತ್ತು ಈ ಬೆನ್ನಲ್ಲೇ ಪಾಸ್ ವ್ಯವಸ್ಥೆಗೆ ಮರುಚಾಲನೆ ನೀಡಲಾಯಿತು.