ಚಿತ್ರ: 100
ನಿರ್ದೇಶನ: ರಮೇಶ್ ಅರವಿಂದ್
ನಿರ್ಮಾಪಕ: ಎಂ ರಮೇಶ್ ರೆಡ್ಡಿ, ಉಮಾ
ಸಂಗೀತ: ರವಿ ಬಸ್ರೂರು
ಛಾಯಾಗ್ರಹಣ: ಸತ್ಯ ಹೆಗ್ಡೆ
ತಾರಾಬಳಗ: ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ಮಾಲತಿ ಸುದೀರ್, ಪ್ರಕಾಶ್ ಬೆಳವಾಡಿ, ವಿಶ್ವ ಕರ್ಣ ಇತರರು.
Advertisement
ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ 100 ಸಿನಿಮಾ ಟ್ರೇಲರ್ ಮೂಲಕ ಚಿತ್ರರಸಿಕರಲ್ಲಿ ಬಹಳ ನಿರೀಕ್ಷೆ ಮೂಡಿಸಿತ್ತು. ತಂತ್ರಜ್ಞಾನ ಇಂದು ನಮ್ಮ ದಿನನಿತ್ಯದ ಕೆಲಸಗಳನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ನಮ್ಮ ಬದುಕಿಗೆ ಮಾರಕವೂ ಆಗಿದೆ. ಅದರ ಮೇಲಿನ ಹಗುರಾದ ಮನೋಭಾವದ ಬದಲಾಗಿ ಎಚ್ಚರಿಕೆಯೂ ಇರಬೇಕು ಎಂಬ ಸೂಕ್ಷ್ಮ ಸಂದೇಶ ಹೊತ್ತ ಮನರಂಜನಾತ್ಮಕ ಸಿನಿಮಾ 100.
Advertisement
Advertisement
ನಾಯಕ ವಿಷ್ಣು ಒಬ್ಬ ದಕ್ಷ ಪೊಲೀಸ್ ಅಧಿಕಾರಿ. ನಿಷ್ಠಾವಂತ ಅಧಿಕಾರಿಯಾಗಿ ಹೆಸರುಗಳಿಸಿಕೊಂಡಿದ್ದ ವಿಷ್ಣುಗೆ ತಾಯಿ, ತಂಗಿ, ಪತ್ನಿ, ಮಗಳು ಒಳಗೊಂಡ ಮುದ್ದಾದ ಕುಟುಂಬವೂ ಇರುತ್ತದೆ. ಸಮಾಜದಲ್ಲಿ ಒಬ್ಬ ಒಳ್ಳೆ ವ್ಯಕ್ತಿಯಾಗಿ ಕುಟುಂಬವನ್ನೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವ ವ್ಯಕ್ತಿ ವಿಷ್ಣು. ಹೀಗಿರುವಾಗ ಉನ್ನತ ಅಧಿಕಾರಿಗಳು ಕೆಲವರ ಪೋನ್ ಟ್ಯಾಪ್ ಮಾಡಿ ರಿಪೋರ್ಟ್ ನೀಡಲು ವಿಷ್ಣುಗೆ ಹೇಳಿರುತ್ತಾರೆ. ಆಗಲೇ ಉದ್ಯಮಿಗಳು, ರಾಜಕಾರಣಿಗಳು, ಪೊಲೀಸ್ ಇಲಾಖೆಯ ಭ್ರಷ್ಟಾಚಾರಗಳ ಕರಾಳ ಜಗತ್ತು ವಿಷ್ಣುಗೆ ಗೋಚರಿಸುತ್ತದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಅವರ ಜೀವನದ ಜೊತೆ ಆಟವಾಡುತ್ತಾ, ಫ್ಲರ್ಟ್ ಮಾಡುತ್ತಿದ್ದ ಹರ್ಷನ ನಂಬರ್ ಟ್ಯಾಪ್ ಮಾಡಿದಾಗ ಬಹುದೊಡ್ಡ ಶಾಕ್ ಕಾದಿರುತ್ತದೆ. ಆತ ಉದ್ಯಮಿಯ ಪತ್ನಿ ಜೊತೆಗಲ್ಲದೆ ತನ್ನ ಪತ್ನಿ ಹಾಗೂ ತಂಗಿ ಜೊತೆಗೂ ಮಾತನಾಡಿರುವ ಆಡಿಯೋ ಕೇಳಿಸಿಕೊಂಡು ಶಾಕ್ ಗೆ ಒಳಗಾಗುತ್ತಾನೆ. ಆ ಶಾಕ್ ನಿಂದ ಹೊರಬರಬೇಕು ಎನ್ನುವಷ್ಟರಲ್ಲೇ ಇಲ್ಲಿವರೆಗೆ ದಾಖಲಿಸಿದ ಪೋನ್ ಟ್ಯಾಪ್ ವಿವರಗಳು, ಆಡಿಯೋ ಫೈಲ್ ಲೀಕ್ ಆಗಿ ವಿಷ್ಣು ಸಂಕಷ್ಟಕ್ಕೆ ಸಿಲುಕುತ್ತಾನೆ. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡಲ್ಲೂ ಸಂಕಷ್ಟಕ್ಕೆ ಸಿಲುಕುವ ವಿಷ್ಣು ತನ್ನ ಕೆಲಸವನ್ನು ಉಳಿಸಿಕೊಳ್ಳುವುದರ ಜೊತೆಗೆ ಕುಟುಂಬವನ್ನು ದೊಡ್ಡ ಗಂಡಾಂತರದಿಂದ ಹೇಗೆ ಪಾರು ಮಾಡುತ್ತಾನೆ ಎನ್ನುವುದೇ 100 ಸಿನಿಮಾದ ಕಥಾಹಂದರ. ಹಾಗಂತ ಇದಿಷ್ಟೇ ಸಿನಿಮಾನ ಅಂದ್ಕೋಬೇಡಿ ಇದರಾಚೆಗೂ ಮನಮುಟ್ಟುವ, ಕಣ್ತೆರೆಸುವ ಸೂಕ್ಷ್ಮಾತಿ ಸೂಕ್ಷ್ಮಗಳು ಸಿನಿಮಾದಲ್ಲಿವೆ. ಅದಕ್ಕೆ ನೀವು ಸಿನಿಮಾ ನೋಡಲೇಬೇಕು. ಇದನ್ನೂ ಓದಿ: ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ
Advertisement
ಫ್ಯಾಮಿಲಿ ಥ್ರಿಲ್ಲರ್ ಹಾಗೂ ಸೈಬರ್ ಕ್ರೈಂ ಕಥಾಹಂದರಕ್ಕೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಿನಿಮಾದಲ್ಲಿದೆ. ಅದುವೇ ಸಿನಿಮಾ ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸಿ ಥ್ರಿಲ್ ನೀಡುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲದೊಂದಿಗೆ ಹಿಡಿದಿಡುತ್ತದೆ. ಊಹೆಗೂ ನಿಲುಕದ ರೋಚಕ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳ ಕಬಂದ ಬಾಹು ನಮ್ಮನ್ನು ಆವರಿಸಿರುವ ಪರಿ ಹಾಗೂ ಅದರಿಂದ ಜೀವ ಹಾಗೂ ಜೀವನದ ಮೇಲೆ ಆಗುತ್ತಿರುವ ಕುತ್ತನ್ನು ಬಹಳ ಪರಿಣಾಮಕಾರಿಯಾಗಿ ಉತ್ತಮ ಸಂಭಾಷಣೆಯೊಂದಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ಇದನ್ನೂ ಓದಿ: ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ
ವಿಷ್ಣು ಪಾತ್ರದಲ್ಲಿ ರಮೇಶ್ ಅರವಿಂದ್ ನಟನೆ ಬಗ್ಗೆ ಎರಡು ಮಾತಿಲ್ಲ. ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಪೂರ್ಣ ಗಮನ ಸೆಳೆಯುತ್ತಾರೆ. ಗ್ಲ್ಯಾಮರ್ ಪಾತ್ರಗಳ ಮೂಲಕ ಕಣ್ಮನ ಸೆಳೆಯುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕನ ತಂಗಿ ಹಿಮಾ ಪಾತ್ರದಲ್ಲಿ ಹೋಮ್ಲಿಯಾಗಿ ಕಾಣಸಿಕೊಂಡಿದ್ದು ಎಲ್ಲರಿಗೂ ಇಷ್ಟವಾಗುತ್ತಾರೆ. ಖಳ ನಟನಾಗಿ ಹರ್ಷ ಪಾತ್ರಧಾರಿ ವಿಶ್ವ ಕರ್ಣ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿ ಕೋಟೆ, ಮಾಲತಿ ಸುದೀರ್ ತಮ್ಮ ಪಾತ್ರವನ್ನು ಎಂದಿನಂತೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ, ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಹೆಚ್ಚೇನು ವಿಶೇಷತೆ ಅನ್ನಿಸದಿದ್ದರೂ ನೋಡಿಸಿಕೊಂಡು ಹೋಗುತ್ತದೆ. ಗುರು ಕಶ್ಯಪ್ ಸಂಭಾಷಣೆ ಸಿನಿಮಾದ ಮುಖ್ಯ ಆಕರ್ಷಣೆ ಅಂದ್ರೆ ತಪ್ಪಾಗೋದಿಲ್ಲ. ಮೈನವಿರೇಳಿಸೋ ಸಾಹಸ ದೃಶ್ಯಗಳು ಶಿಳ್ಳೆ ಗಿಟ್ಟಿಸಿಕೊಂಡರೂ ಕೊನೆಯಲ್ಲಿ ಬರುವ ಫೈಟಿಂಗ್ ಸೀನ್ ಕೊಂಚ ಅಭಾಸ ಎನ್ನಿಸಿದರೂ ಕಮರ್ಶಿಯಲ್ ದೃಷ್ಟಿಯಲ್ಲಿ ನೋಡಿದಾಗ ಅವಶ್ಯ ಎನಿಸುತ್ತದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಜೊತೆಗೆ ಪೋಷಕರು ಕೂಡ ಮಿಸ್ ಮಾಡ್ದೆ ನೋಡಲೇಬೇಕಾದ ಸಿನಿಮಾ 100.
ಪಬ್ಲಿಕ್ ರೇಟಿಂಗ್: 3.5/5