– ಪ್ರವಾಸಿ ತಾಣವಾದ ಸ್ಥಳ
ಚಿಕ್ಕಮಗಳೂರು: ಕೈ-ಕಾಲು ಕೆಸರಾದರು ಬೆಳೆಯುವ ಬೆಳೆಗೆ ಹೃದಯದ ಸ್ಪರ್ಶ ನೀಡಿ ಭೂಮಾತೆಯ ಹೃದಯದಲ್ಲೇ ಅನ್ನ ಬೆಳೆಯುತ್ತಿದ್ದಾರೆ ಮಲೆನಾಡಿನ ಮುಗ್ಧ ಅನ್ನದಾತ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಸಮೀಪದ ಬಾಮಿಕೊಂಡ ಗ್ರಾಮದ ರೈತ ಕೃಷ್ಣನ ಈ ಭತ್ತದ ಗದ್ದೆ ಈಗ ಪ್ರವಾಸಿ ತಾಣವಾಗಿದೆ. ತಂದೆಯ ಕಾಲದಿಂದಲೂ ಅಂದರೆ ಸರಿ ಸುಮಾರು 100ಕ್ಕೂ ಅಧಿಕ ವರ್ಷಗಳಿಂದಲೂ ಕೂಡ ಕೃಷ್ಣ ಹೃದಯದಲ್ಲೇ ಭತ್ತ ಬೆಳೆಯುತ್ತಿದ್ದಾರೆ.
Advertisement
Advertisement
ತಮ್ಮ ಭತ್ತದ ಗದ್ದೆಗೆ ಹೃದಯದ ಆಕಾರ ನೀಡಿರೋ ಇವರು ಶತಮಾನದಿಂದ ಭೂದೇವಿಯನ್ನ ಹೃದಯದಲ್ಲೇ ಭತ್ತದ ಗದ್ದೆಯಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಇದನ್ನ ಇವರು ಶೋಕಿಗಾಗೋ ಅಥವಾ ಪ್ರಚಾರಕ್ಕಾಗೋ ಮಾಡಿದ್ದಲ್ಲ. ಶತಮಾನಗಳ ಹಿಂದೆ ಯಾವ ಟ್ರ್ಯಾಕ್ಟರ್, ಜೆಸಿಬಿ ಏನೂ ಇರಲಿಲ್ಲ. ಎತ್ತಿನ ಹೆಗಲಿಗೆ ನೊಗ ಕಟ್ಟಿ ಗುಡ್ಡವನ್ನ ಸಮಮಾಡಿ ಮಾಡಿದ ಭತ್ತದ ಗದ್ದೆ ಇದು. ಅಂದಿನಿಂದಲೂ ಇದನ್ನ ಹಾಗೇ ಬಿಟ್ಟಿದ್ದಾರೆ. ಅಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು. ಮಧ್ಯದಲ್ಲೊಂದು ಗದ್ದೆ. ಗದ್ದೆಯ ಮಧ್ಯದಲ್ಲಿ ಖಾಲಿ ಬಿಟ್ಟಿರೋ ಹೃದಯ ಆಕಾರದ ಜಾಗ. ಇದೀಗ ಆ ಜಾಗವೇ ನೋಡುಗರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.
Advertisement
Advertisement
ಈ ಜಾಗವಿರೋದು ಸ್ಥಳಿಯರಿಗೆ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈ ಸುಂದರ ತಾಣದ ಒಂದೆರಡು ಫೋಟೋಗಳು ಹೊರಬೀಳುತ್ತಿದ್ದಂತೆ ಈಗಾಗಲೇ ಸುತ್ತಮುತ್ತಲಿನ ಜಾಗಕ್ಕೆ ಭೇಟಿ ನೀಡೋದಕ್ಕೆ ಶುರುವಿಟ್ಟಿದ್ದಾರೆ. ನಾಲ್ಕು ಎಕರೆಯ ಈ ಭತ್ತದ ಗದ್ದೆಗೆ ಎರಡು ಎಕರೆಗೆ ದಾಖಲೆ ಇದೆ. ಅಜ್ಜನ ಕಾಲದಿಂದಲೂ ಭೂಮಾತೆಯ ಹೃದಯದಲ್ಲೇ ಭತ್ತ ಬೆಳೆಯುತ್ತಿರೋ ರೈತ ಕೃಷ್ಣನ ಕುಟುಂಬ 100 ವರ್ಷಗಳ ಹಿಂದೆ ಹೇಗಿತ್ತೋ ಇಂದಿಗೂ ಹಾಗೇ ಬಿಟ್ಟಿದ್ದಾರೆ. ಅದೇ ಆಕಾರದಲ್ಲಿ ಭತ್ತ ಬೆಳೆಯುತ್ತಿದ್ದಾರೆ.
ಬೆಟ್ಟದ ತುದಿಯಲ್ಲಿರೋ ಭತ್ತದ ಗದ್ದೆಯ ಸುತ್ತಲೂ ಇರುವ ಬೆಟ್ಟಗುಡ್ಡದ ಮೇಲೆ ಹಾಸಿರೋ ಹಸಿರ ವನರಾಶಿ ಭತ್ತದ ಗದ್ದೆಯ ಅಂದ ಹೆಚ್ಚಿಸಿದ್ದು, ಮಲೆನಾಡು ಕೇಳಿದ್ದೆಲ್ಲವನ್ನೂ ಕೊಡುವ ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ದೂರದ ದೇಶಗಳಲ್ಲಿ ಇಂತಹ ಚಿತ್ರಣ ನೋಡಿ ಜನ ಬೆರಗಾಗುತ್ತಿದ್ದರು. ಆದರೆ 100 ವರ್ಷಗಳ ಹಿಂದೆಯೇ ಇಂತಹ ಅದ್ಭುತ ಲೋಕವನ್ನ ಸೃಷ್ಟಿಸಿರೋ ನಮ್ಮ ರೈತರೇ ನಮ್ಮ ಹೆಮ್ಮೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಬೇಸಿಗೆಯಲ್ಲಿ ಸಿನಿಮಾ ಶೂಟಿಂಗ್:
ಭೂಮಾತೆಯ ಮಡಿಲಲ್ಲೇ ಅನ್ನ ಬೆಳೆಯುತ್ತಿರೋ ರೈತ ಕೃಷ್ಣನ ಈ ಸುಂದರ ತಾಣ ಸಿನಿಮಾ ಶೂಟಿಂಗ್‍ಗೂ ಸಾಕ್ಷಿಯಾಗಿದೆ. ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ಇಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆದಿತ್ತು ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ. ಈ ಹೃದಯ ಭತ್ತದ ಗದ್ದೆಯಲ್ಲಿ ಒಂದು ದಿನ ಶೂಟಿಂಗ್ ನಡೆದಿದೆ. ಆದರೆ, ಯಾವ ಸಿನಿಮಾ ಅನ್ನೋದು ನನಗೆ ನೆನಪಿಲ್ಲ ಅಂತಾರೆ ಕೃಷ್ಣ. ಬಂದಿದ್ದ ಸಿನಿಮಾದವರು ಮುಂದೆ ಬರುತ್ತೀವಿ ಎಂದು ಹೇಳಿದ್ದಾರಂತೆ. ಆದರೆ, ಸುತ್ತಲೂ ಹಸಿರುಟ್ಟ ತುಂಬು ಮುತ್ತೈದೆಯಂತ ಪ್ರಕೃತಿ. ಆ ಪ್ರಕೃತಿಯ ಮಾತೆಯ ಹೃದಯದಲ್ಲಿ ಅನ್ನ ಬೆಳೆಯುತ್ತಿರೋ ಮುಗ್ಧ ಅನ್ನದಾತ. ತಲೆ ತಗ್ಗಿಸಿದರೂ ಸೌಂದರ್ಯ, ತಲೆ ಎತ್ತಿದರೂ ಸೌಂದರ್ಯ. ಅಂತಹ ಅದ್ಭುತವಾದ ಈ ತಾಣವನ್ನ ನೋಡಲೆರಡು ಕಣ್ಣು ಸಾಲದಂತಿರೋದಂತು ಸತ್ಯ.