ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಕಾಲುವೆಗೆ ಬಿದ್ದು ಎರಡು ಮಕ್ಕಳು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ, ಮತ್ತೊಂದು ಮಗು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದಲ್ಲಿ ನಡೆದಿದೆ.
ಕಂಕಣವಾಡಿ ಪಟ್ಟಣದ ರಾಹುಲ್ ಬ್ಯಾಕೂಡ(10) ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಮಗು. ಆಟವಾಡುತ್ತ ರಾಹುಲ್ ಕಾಲುವೆಗೆ ಜಾರಿ ಬಿದ್ದಿದ್ದು, ಬಾಲಕನ ಶವವನ್ನ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ
ಕಾಲುವೆ ಪಕ್ಕದಲ್ಲೇ ನಿನ್ನೆ ಸಂಜೆ ಆಟವಾಡುವ ಸಂದರ್ಭದಲ್ಲಿ ರಾಹುಲ್ ಬಿದ್ದಿದ್ದು, ಆತನ ತಮ್ಮ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಾನೆ. ವಿಷಯ ತಿಳಿದು ನಿನ್ನೆ ಸಂಜೆಯಿಂದ ಹುಡುಕಾಟ ನಡೆಸಿದಾಗ ಇಂದು ರಾಹುಲ್ ಶವವಾಗಿ ಪತ್ತೆಯಾಗಿದ್ದಾನೆ.
ರಾಯಬಾಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆಯಷ್ಟೆ ಕಾಲುವೆಗೆ ಬಿದ್ದ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದರು.