ಬೆಳಗಾವಿ: ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರ ಆಳುತ್ತಿದೆ. ಇಂದು 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ. ಸರ್ಕಾರ ಕೂಡ ಗ್ರಂಥ ಹೇಳಿದಂತೆ ನಡೆದುಕೊಳ್ಳುತ್ತಿದೆ ಅಂತ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಮೌಢ್ಯ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ವಾರಗಳಿಂದ ಗ್ರಹಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಗ್ರಹಣ ಪರ, ವಿರೋಧ ಅನೇಕರು ವಾದ ಮಾಡುತ್ತಾರೆ. ಹೀಗಾಗಿ ಜನರನ್ನು ಮೌಢ್ಯದಿಂದ ಹೊರಬರಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಾಸ್ತ್ರದಂತೆ ಊಟ ಮಾಡುವಂತಿಲ್ಲ, ಕುಡಿಯುವ ನೀರನ್ನು ಚೆಲ್ಲುವಂತೆ ಹೇಳುತ್ತಾರೆ. ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರೀಯೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ 10 ರೂ, ಪಂಚಾಂಗ ನಮ್ಮನ್ನಿಂದು ಆಳುತ್ತಿದೆ ಅಂದ್ರು.
ಗ್ರಹಣ ಸಂದರ್ಭದಲ್ಲಿ ದೇವಸ್ಥಾನ ಬೀಗ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಷ್ಟ ಕಾಲದಲ್ಲಿ ಕೈಹಿಡಿಯಬೇಕಿದ್ದ ದೇವರನ್ನು ಬಿಗ ಹಾಕಲಾಗಿದೆ. ಇದು ಸಮಾಜದಲ್ಲಿ ಕೆಟ್ಟ ಪದ್ಧತಿಯಾಗಿದೆ ಅಂದ್ರು.
ಹೆಚ್ಚು ಮತ ಪಡೆಯುವುದು ಗೊತ್ತು:
ಕಡಿಮೆ ಅಂತರದಿಂದ ಗೆದ್ದಿದ್ದಕ್ಕೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ. ಕಡಿಮೆ ಹಣ ಖರ್ಚು ಮಾಡಿ ಮತದಾರರ ಕಡೆ ಹೋಗದೆ ಗೆಲ್ಲಿಸಿದ್ದಾರೆ. ಇದು ಭಾರತ ದೇಶದಲ್ಲಿ ಪ್ರಥಮ ಪ್ರಯೋಗವಾಗಿದೆ. ಹೆಚ್ಚು ಮತ ಪಡೆಯೋದು ನನಗೆ ಗೊತ್ತು. ನಮ್ಮ ಅಕ್ಕಪಕ್ಕದ ಕ್ಷೇತ್ರದ ಮನೆ ಮಂದಿಯೆಲ್ಲ ಚುನಾವಣೆಯ ಪ್ರಚಾರ ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇವೆ ಅಂತ ಹೇಳಿದ್ರು.
ಜೇನುಗೂಡಿಗೆ ಕಲ್ಲು ಹೊಡೆದಿದ್ದೇವೆ ಎಂದು ಈ ಹಿಂದೆ ಹೇಳಿದ್ದೆ. ಲಿಂಬೆಕಾಯಿ ಕೈಯಲ್ಲಿ ಹಿಡಿದಿದ್ದಕ್ಕೆ ಅಪಪ್ರಚಾರ ಮಾಡಲಾಗುತ್ತದೆ. ಲಿಂಬೆಕಾಯಿಯಿಂದ ಅನೇಕ ಆರೋಗ್ಯ ಉಪಯೋಗವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಒಟ್ಟಿನಲ್ಲಿ ಮನುಷ್ಯ ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು. ಅಂಬೇಡ್ಕರ್ ಸಾಮಾಜಿಕ ನ್ಯಾಯದ ರಥ ಮುಂದುವರೆಸಿದ್ದೇವೆ ಅಂದ್ರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ:
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಯಲ್ಲಿ ಅನ್ಯಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನ, ಮಂಡ್ಯಕ್ಕೆ 200 ಕೋಟಿ ಕೊಟ್ಟ ತಕ್ಷಣ ಅನ್ಯಾಯ ಅಂತ ಹೇಳಕ್ಕೆ ಆಗಲ್ಲ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಉ.ಕ ಭಾಗಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ಈ ಭಾಗದ ಶಾಸಕರಾಗಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಜನ ಜೆಡಿಎಸ್ ಪಕ್ಷಕ್ಕೆ ಮತ ಹಾಕದೇ ಇದ್ದಿರಬಹುದು. ಆದ್ರೆ ಸಮ್ಮಿಶ್ರ ಸರ್ಕಾರದ ಭಾಗಿಯಾಗಿರೋ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಅಂತ ಹೇಳಿದ್ರು.
ಆಗಸ್ಟ್.2 ಬಂದ್:
ಆ.2ಕ್ಕೆ ಉತ್ತರ ಕರ್ನಾಟಕ ಬಂದ್ ಕರೆ ವಿಚಾರದ ಕುರಿತು ಮಾತನಾಡಿದ ಅವರು, ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ಸಿಎಂ ಭೇಟಿಗೆ ಚಿಂತನೆ ನಡೆಸಲಾಗಿದೆ. ಗಮನ ಸೆಳೆಯುವ ಯತ್ನ ಹೋರಾಟ ಯಾರು ಬೇಕಾದ್ರೂ ಮಾಡಬಹುದು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಮ್ಮ ಬೆಂಬಲವಿಲ್ಲ. ಅನ್ಯಾಯವಾದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಅಂತ ತಿಳಿಸಿದ್ರು.