‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?

Public TV
2 Min Read
BAAVALI JWARA 5

ಪೇರಾಂಬ್ರ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಜ್ವರಕ್ಕೆ ಕೇರಳದಲ್ಲಿ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಪುಣೆಯಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಮೂವರ ಸಾವಿಗೆ ನಿಪಾ ವೈರಸ್ ಕಾರಣ ಎನ್ನುವುದನ್ನು ದೃಢಪಡಿಸಿದೆ. ಕೇರಳದ ಕೋಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ.

ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜೊತೆಗೆ ಎಲ್ಲಾ ವಿವರಗಳನ್ನು ಆರೋಗ್ಯ ಇಲಾಖೆಗೆ ಪ್ರತಿ ನಿತ್ಯ ಆರೋಗ್ಯ ಇಲಾಖೆಗೆ ನೀಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೂಚನೆಯಂತೆ ಇಂದು ಬೆಳಗ್ಗೆಯೇ ಕೇಂದ್ರ ಸರ್ಕಾರದ ವೈದ್ಯಕೀಯ ತಂಡವೊಂದು ಕೇರಳಕ್ಕೆ ಆಗಮಿಸಿದೆ.

BAAVALI JWARA 3

ನಿಪಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

ವೈರಸ್ ಹೇಗೆ ಹರಡುತ್ತದೆ?
ಬಾವಲಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ)
ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ
ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ

ನಿಪಾ ವೈರಸ್ ಲಕ್ಷಣಗಳೇನು?
– ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
– ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
– ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
– ಬಳಿಕ ಪ್ರಜ್ಞಾಹೀನರಾಗುತ್ತಾರೆ
– ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
– ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

BAAVALI JWARA 2

ಎಚ್ಚರಿಕೆಯಿಂದಿರಿ..!
– ಪ್ರಾಣಿ ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬೇಡಿ
– ಒಂದು ವೇಳೆ ನೀವು ರೋಗಿಯ ಜೊತೆಗಿದ್ದರೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಿ
– ರೋಗಿಯ ಚಿಕಿತ್ಸೆ ವೇಳೆ ಮುಖಕ್ಕೆ ಮಾಸ್ಕ್, ಕೈಗವಚ ಧರಿಸಿ
– ಬಾವಲಿಗಳ ಸಂಖ್ಯೆ ಹೆಚ್ಚಿರುವ ಕಡೆ ಸಂಗ್ರಹಿಸುವ ಶೇಂದಿ, ಪಾನೀಯಗಳನ್ನು ಸೇವಿಸಬೇಡಿ

ಚಿಕಿತ್ಸೆ ನೀಡಿದ ನರ್ಸ್ ಸಾವು: ನಿಪಾ ವೈರಸ್ ಹರಡಿ ಆಸ್ಪತ್ರೆ ಸೇರಿದವರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಬಾವಲಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಪೇರಾಂಬ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಲೀನಾ ಮೃತಪಟ್ಟವರು. ಈ ರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು ಸಂಬಂಧಿಕರಿಗೆ ಈಕೆಯ ಮೃತದೇಹ ಬಿಟ್ಟು ಕೊಡದೆ ಕೇರಳ ಸರ್ಕಾರವೇ ಈಕೆಯ ಅಂತ್ಯಸಂಸ್ಕಾರ ನಡೆಸಿದೆ.

ಘಟನೆ ಹಿನ್ನೆಲೆಯಲ್ಲಿ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಇಂದು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ರೋಗ ನಿಯಂತ್ರಣಕ್ಕೆ ಎಲ್ಲಾ ವಿಧದ ಕ್ರಮಕೈಗೊಂಡಿದ್ದೇವೆ. ಈಗ ಚಿಕಿತ್ಸೆಯಲ್ಲಿರುವ 8 ಮಂದಿಯಲ್ಲಿ ವೈರಸ್ ಇರುವುದು ಖಚಿತಪಟ್ಟಿದೆ ಎಂದು ಹೇಳಿದ್ದಾರೆ. ಅಗತ್ಯ ನಿರ್ವಹಣೆಗಾಗಿ ಮೆಡಿಕಲ್ ಕಾಲೇಜಿಗೆ 20 ಲಕ್ಷ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಬಾವಲಿಗಳಿದ್ದ ಬಾವಿಯ ನೀರು ಸೇವನೆ ಹಾಗೂ ಬಾವಲಿಗಳು ಕಚ್ಚಿದ ಮಾವಿನ ಹಣ್ಣು ತಿಂದಿದ್ದರಿಂದ ಈ ರೋಗ ಹರಡಿದೆ ಎನ್ನುವುದು ಸದ್ಯಕ್ಕೆ ಖಚಿತವಾಗಿದೆ. ಬಾವಿಯ ನೀರಿನಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಾವಿಯನ್ನು ಮುಚ್ಚಿದ್ದೇವೆ ಎಂದು ಶೈಲಜಾ ಸ್ಪಷ್ಟನೆ ನೀಡಿದ್ದಾರೆ. ರೋಗಿಗಳ ಜೊತೆ ಸಂಪರ್ಕದಲ್ಲಿದ್ದ ಎಲ್ಲರ ಆರೋಗ್ಯ ತಪಾಸಣೆ ಮಾಡಲು ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

BAAVALI JWARA 4

Share This Article
Leave a Comment

Leave a Reply

Your email address will not be published. Required fields are marked *