ಮಡಿಕೇರಿ: ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಲು ಹತ್ತು ದಿನಗಳು ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದರಿಂದ ಹತ್ತು ದಿನಗಳು ರಾಜ್ಯದಾದ್ಯಂತ ಪುನಃ ಲಾಕ್‍ಡೌನ್ ಘೊಷಿಸಬೇಕು. ಅಲ್ಲದೇ ಕೊಡಗು ಜಿಲ್ಲೆಯನ್ನು ಹತ್ತು ದಿನ ಲಾಕ್ ಡೌನ್ ಮಾಡುವುದೇ ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.
ಅಲ್ಲದೇ ಶಾಲಾ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಹಿಂದೆಲ್ಲ ಪೋಷಕರಿಗೆ ನಾಲ್ಕೈದು ಮಕ್ಕಳಿರುತ್ತಿದ್ದರು. ಆದರೆ ಪ್ರಸ್ತುತ ಒಬ್ಬರೇ ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಶೀಘ್ರದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಶುರುಮಾಡುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ
ಕೇಂದ್ರ ಹೇಳಿದ್ದು ಏನು?
ಅಕ್ಟೋಬರ್ 1 ರಿಂದ ಅನ್‌ಲಾಕ್ 5 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರಲ್ಲಿ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅಕ್ಟೋಬರ್ 31ರವರೆಗೆ ಲಾಕ್‌ಡೌನ್ ಇರಲಿದೆ ಎಂದು ಹೇಳಿದೆ. ರಾಜ್ಯ ಸರ್ಕಾರಗಳು ಗೃಹ ಸಚಿವಾಲಯವನ್ನು ಸಂರ್ಪಕಿಸದೇ ಕಂಟೈನ್ಮೆಂಟ್ ವಲಯ ಬಿಟ್ಟು ಬೇರೆ ಕಡೆ ಲಾಕ್‌ಡೌನ್ ಮಾಡಲು ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.