– ಇತಿಹಾಸದ ಪುಟ ಸೇರಿದ ಇಂಗ್ಲೆಂಡ್ ವಿರುದ್ಧದ ಪಂದ್ಯ
ನವದೆಹಲಿ: ‘ದಿ ವಾಲ್’ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಪೈಕಿ ತಂಡ 10 ಮಂದಿ ಬ್ಯಾಟ್ಸ್‌ಮನ್ ಜೊತೆಗೆ ದ್ರಾವಿಡ್ ಜೊತೆಯಾಟವಾಡಿದ್ದು ಇತಿಹಾಸ.
ಇದನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಇನ್ನಿಂಗ್ಸ್ ಎಂದು ವರ್ಗೀಕರಿಸಬಹುದಾಗಿದೆ. ಅಪ್ರತಿಮ ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ತಂಡದ ಎಲ್ಲಾ 10 ಸಹ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿದ್ದರು. ಅವರ ಅಜೇಯ 146 ರನ್‍ಗಳಿಂದ ಭಾರತ ಅಂದಿನ ಪಂದ್ಯದಲ್ಲಿ ಒಟ್ಟು 300 ರನ್ ಪೇರಿಸಿತ್ತು.
Advertisement
Advertisement
ಇಂಗ್ಲೆಂಡ್‍ನ ದಿ ಓವಲ್ ಕ್ರೀಡಾಂಗಣದಲ್ಲಿ 2011ರ ಆಗಸ್ಟ್ 18 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ನಡೆದಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಓಪನರ್ ಆಗಿ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಮೈದಾನಕ್ಕೆ ಇಳಿದಿದ್ದರು. ಆದರೆ 8 ರನ್ ಗಳಿಸಿದ್ದ ಸೆಹ್ವಾಗ್ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ವಿ.ವಿ.ಎಸ್.ಲಕ್ಷ್ಮಣ್ 2 ರನ್, ಸಚಿನ್ ತೆಂಡೂಲ್ಕರ್ 23 ರನ್, ಸುರೇಶ್ ರೈನಾ 0 ರನ್, ಇಶಾಂತ್ ಶರ್ಮಾ 1, ಎಂ.ಎಸ್.ಧೋನಿ 17 ಗಳಿಸಿ ವಿಕೆಟ್ ಒಪ್ಪಿಸಿ ಪೆವಿಯನ್‍ಗೆ ಪರೇಡ್ ನಡೆಸಿದ್ದರು.
Advertisement
ಇನ್ನಿಂಗ್ಸ್ ನ 45.4ನೇ ಓವರಿಗೆ ಭಾರತ 6 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳಿಸಿತ್ತು. ಈ ವೇಳೆ ಮೈದಾನಕ್ಕಿಳಿದ ಅಮಿತ್ ಮಿಶ್ರಾ ಅವರು ರಾಹುಲ್ ದ್ರಾವಿಡ್‍ಗೆ ಸಾಥ್ ನೀಡಿದರು. ಈ ಜೋಡಿಯು 7ನೇ ವಿಕೆಟ್‍ಗೆ 143 ಎಸೆತಗಳಲ್ಲಿ ಒಟ್ಟು 87 ರನ್ ಚಚ್ಚಿ ತಂಡದ ಮೊತ್ತವನ್ನು 244ಕ್ಕೆ ಏರಿಸಿತ್ತು. ಅಂದು ಅಮಿತ್ ಮಿಶ್ರಾ 77 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಬಳಿಕ ಬಂದ ಗೌತಮ್ ಗಂಭೀರ್ 25 ರನ್, ಆರ್.ಪಿ.ಸಿಂಗ್ 25 ರನ್ ಹಾಗೂ ಶ್ರೀಶಾಂತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
Advertisement
ಅಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗ್ರೇಮ್ ಸ್ವಾನ್ ಮತ್ತು ಟಿಮ್ ಬ್ರೆಸ್ನಾನ್ ತಲಾ ಮೂರು ವಿಕೆಟ್ ಪಡೆದಿದ್ದರೆ, ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಎರಡು ವಿಕೆಟ್ ಕಿತ್ತಿದ್ದರು. ಇದು ಟೀಂ ಇಂಡಿಯಾ ಬ್ಯಾಟಿಂಗ್ ಸಾಮಾನ್ಯ ಪ್ರದರ್ಶನವಾಗಿದ್ದರೂ, ದ್ರಾವಿಡ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಭಾರತದ ತಂಡಕ್ಕೆ ದ್ರಾವಿಡ್ ಎಷ್ಟು ವಿಶ್ವಾಸಾರ್ಹರಾಗಿದ್ದರು ಎಂಬುದಕ್ಕೆ ಇನಿಂಗ್ಸ್‍ನ ಸ್ಕೋರ್ ಕಾರ್ಡ್ ನಿಜವಾದ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಒಂದು ಇನ್ನಿಂಗ್ಸ್ ಹಾಗೂ 8 ರನ್‍ಗಳಿಂದ ಗೆದ್ದು ಬೀಗಿತ್ತು.