ರಾಯಚೂರು: ಲೋಕಕಲ್ಯಾಣಕ್ಕಾಗಿ 1.96 ಲಕ್ಷ ಭಕ್ತರಿಂದ ಏಕಕಾಲಕ್ಕೆ ಇಷ್ಟಲಿಂಗಪೂಜೆ ಮಾಡಿಸಲು ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯ ದೇವದುರ್ಗದ ಆದಿಲಿಂಗ ಮೌನೇಶ್ವರ ಆಸನಕಟ್ಟೆ ಸುಕ್ಷೇತ್ರ ವೀರಗೋಟದಲ್ಲಿ ಲೋಕಕಲ್ಯಾಣಕ್ಕಾಗಿ ಫೆಬ್ರವರಿ 15 ರಿಂದ 18ರ ವರೆಗೆ ಮಹಾ ಲಿಂಗಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುಮಾರು 800 ಜನ ಮಠಾಧೀಶರ ನೇತೃತ್ವದಲ್ಲಿ ಫೆ.18 ರಂದು 1.96 ಲಕ್ಷ ಭಕ್ತರಿಂದ ಏಕಕಾಲಕ್ಕೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ನೆರವೇರಿಸಿದ್ದ ಮಹಾಲಿಂಗಪೂಜೆ ಮಾಡಲಾಗಿತ್ತು. ಬಳಿಕ 50 ವರ್ಷದ ಹಿಂದೆ ವಿಜಯಪುರದಲ್ಲಿ ಈ ರೀತಿ ಮಹಾಲಿಂಗ ಪೂಜೆ ನೇರವೇರಿತ್ತು. ಈಗ ಮತ್ತೊಮ್ಮೆ ಲಿಂಗಪೂಜೆ ಮಾಡಿ ದಾಖಲೆ ನಿರ್ಮಿಸಲು ರಾಯಚೂರು ಜಿಲ್ಲೆ ಸಜ್ಜಾಗಿದೆ.
Advertisement
Advertisement
ವಿಜಯಪುರದ ಬಂಥನಾಳದ ಲಿಂಗೈಕ್ಯ ಸಂಗನಬಸವ ಶ್ರೀಗಳು ಕಲ್ಯಾಣದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಗ ವೀರಗೋಟದಲ್ಲಿ ಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ 800 ಜನ ಗುರು-ವಿರಕ್ತ ಮಠಾಧೀಶರು ಭಾಗವಹಿಸಲಿದ್ದಾರೆ. ಈ ಲಿಂಗಪೂಜೆಯನ್ನ ಗಿನ್ನಿಸ್ ದಾಖಲೆಗೆ ಸೇರಿಸುವ ಪ್ರಯತ್ನವೂ ನಡೆಸುತ್ತಿದ್ದು, 20 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
Advertisement
Advertisement
ಕಾರ್ಯಕ್ರಮಕ್ಕೆ ಬರುವವರಿಗಾಗಿ 10 ಎಕರೆ ಪ್ರದೇಶದಲ್ಲಿ 60 ಅಡಿ ಅಗಲದ ನಾಲ್ಕು ರಸ್ತೆಗಳನ್ನ ನಿರ್ಮಿಸಲಾಗಿದೆ. 71 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಹಾಪ್ರಸಾದಕ್ಕಾಗಿ 8 ಸಾವಿರ ಕ್ವಿಂಟಲ್ ಅಕ್ಕಿ, 5 ಸಾವಿರ ಕ್ವಿಂಟಾಲ್ ಗೋಧಿ, 1 ಸಾವಿರ ಕ್ವಿಂಟಾಲ್ ತೊಗರಿ ಬೇಳೆ, 2 ಟ್ಯಾಂಕರ್ ಎಳ್ಳೆಣ್ಣೆ, 30 ಕ್ವಿಂಟಾಲ್ ಖಾರದಪುಡಿ, 200 ಕ್ವಿಂಟಾಲ್ ಶೇಂಗಾ ಹೋಳಿಗೆ, 12 ಲೋಡ್ ತರಕಾರಿ ಬಳಸಲಾಗುತ್ತಿದೆ. ಇಷ್ಟಲಿಂಗ ಪೂಜೆಗೆ 225 ಅಡಿ ಅಗಲದ 85 ಅಡಿ ಉದ್ದದ ವೇದಿಕೆ ಹಾಗೂ 19 ಕೌಂಟರ್ ಗಳನ್ನ ನಿರ್ಮಿಸಿದ್ದು, ಪ್ರತಿ ಕೌಂಟರ್‍ನಲ್ಲಿ 11 ಸಾವಿರ ಜನರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟು 65 ಎಕರೆ ಪ್ರದೇಶವನ್ನ ಪೂಜೆಗೆ ಮೀಸಲಿರಿಸಲಾಗಿದೆ. ಹಾಗೆಯೇ ವಾಹನ ನಿಲುಗಡೆ ಹಾಗೂ ಭಕ್ತರಿಗೆ ಪೂಜೆ ವೀಕ್ಷಣೆಗಾಗಿ 1200 ಎಕ್ರೆ ಪ್ರದೇಶವನ್ನ ಬಳಸಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುವ ನಿರೀಕ್ಷೆಯಿದ್ದು, ದಾಖಲೆ ಮಟ್ಟದ ಲಿಂಗಪೂಜೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ವಿಶೇಷ ಏನೆಂದರೆ ಕಾರ್ಯಕ್ರಮಕ್ಕೆ ಎಲ್ಲಾ ಖರ್ಚುವೆಚ್ಚಗಳನ್ನ ಭಕ್ತರೇ ಭರಿಸುತ್ತಿದ್ದು, ರೈತರು ತಮ್ಮ ಜಮೀನುಗಳನ್ನ ಕಾರ್ಯಕ್ರಮಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv