– ಪ್ರತಿಪಕ್ಷಗಳ ಪ್ರತಿಭಟನೆಯಿಂದ ಕೊರೊನಾ ಹೆಚ್ಚಳ
– ಪ್ರತಿಭಟನೆಗೆ ಇತರ ಮಾರ್ಗಗಳಿವೆ
ತಿರುವನಂತಪುರಂ: ಹೋರಾಟಗಳ ಹೆಸರಿನಲ್ಲಿ ಪ್ರತಿಪಕ್ಷಗಳು ಕೋವಿಡ್ ನಿಯಂತ್ರಣಗಳನ್ನು ದಿಕ್ಕುತಪ್ಪಿಸುತ್ತಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.
ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ತಿರುವನಂತಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕೋವಿಡ್ ರಕ್ಷಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೋವಿಡ್ ಆರಂಭದ ಹಂತದಲ್ಲಿದ್ದ ಜಾಗರೂಕತೆಗಳನ್ನು ಇದೀಗ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಹೇಳಿದರು.
Advertisement
Advertisement
ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ವಿವಿಧ ಸರಣಿ ಪ್ರತಿಭಟನೆಗಳು ತಿರುವನಂತಪುರದಲ್ಲಿ ಹಲವು ದಿನಗಳಿಂದ ನಡೆಯುತ್ತಿವೆ. ಈ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ಕೋವಿಡ್ 19 ನಿಯಂತ್ರಿಸಲು ಜನಸಂದಣಿಯನ್ನು ತಪ್ಪಿಸುದೇ ಅತೀ ಮುಖ್ಯವಾಗಿದೆ. ಆದರೆ ಮಾಸ್ಕ್ ಧರಿಸದೇ ಜನರು ಗುಂಪಾಗಿ ಸೇರಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಎಂದು ಪ್ರತಿಪಕ್ಷಗಳನ್ನು ಟೀಕಿಸಿದರು.
Advertisement
ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಕೋವಿಡ್‌ಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ 101 ಮಂದಿ ಪೊಲೀಸರಿಗೆ ಸೋಂಕು ಬಂದಿದೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ದೇಶದಲ್ಲಿ ಎಲ್ಲಿ ಲಾಕ್‌ಡೌನ್, 144 ಸೆಕ್ಷನ್ ಜಾರಿಯಾಗಿದೆ?
Advertisement
ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಆದರೆ ರಾಜಕೀಯ ಪಕ್ಷಗಳು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿಭಟನಾಕಾರರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಸಮಾಜಕ್ಕೆ ಅಪಾಯವಿದೆ. ಪ್ರತಿಭಟನೆಗೆ ಇತರ ಮಾರ್ಗಗಳಿವೆ. ಕೊರೊನಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕೇರಳದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 39,258 ಆಗಿದ್ದು, ಅದರಲ್ಲಿ 7,047 ಪ್ರಕರಣಗಳು ತಿರುವನಂತಪುರ ಜಿಲ್ಲೆಯಲ್ಲಿವೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಶೇ.18 ಪ್ರಕರಣಗಳು ತಿರುವನಂತಪುರದಲ್ಲಿವೆ. ಒಟ್ಟು ರಾಜ್ಯದಲ್ಲಿ 553 ಸಾವುಗಳು ವರದಿಯಾಗಿದ್ದರೆ, ತಿರುವನಂತಪುರ ಒಂದೇ ಜಿಲ್ಲೆಯಲ್ಲಿ ಮಾತ್ರ 175 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಡೆಯತ್ತಿರುವ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.