ನವದೆಹಲಿ: ಹೊಸ ವರ್ಷಕ್ಕೆ ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರ ಉಡುಗರೆ ನೀಡಲಿದೆಯಾ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಕೋವಿಶೀಲ್ಡ್ ಲಸಿಕೆಗೆ ಇಂದು ಅನುಮತಿ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಷರತ್ತುಗಳನ್ನು ವಿಧಿಸಿ ಆಕ್ಸ್ ಫರ್ಡ್ ಹಾಗೂ ಆಸ್ಟ್ರಾಜೆನೆಕಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಗೆ ಮೊದಲನೇ ಹಂತದ ಅನುಮತಿ ನೀಡಲಾಗಿದ್ದು, ಭಾರತ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಸಹ ಅಂತಿಮ ಹಂತದ ಅನುಮತಿ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸಿಜಿಐ ತಜ್ಞರೊಂದಿಗೆ ಇಂದು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಬಹುತೇಕ ಇಂದೇ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇಂದು ಬೆಳಗ್ಗೆಯಿಂದಲೇ ತಜ್ಞರ ಸಮಿತಿ ಸಭೆಗಳನ್ನು ನಡೆಸುತ್ತಿದ್ದು, ಮೊದಲನೇ ಹಂತದಲ್ಲಿ ಷರತ್ತುಗಳನ್ನು ವಿಧಿಸಿ ಕೋವಿಶೀಲ್ಡ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಅಂತಿಮ ಹಂತದ ಅನುಮತಿ ಸಿಗಲಿದೆಯೇ ಕಾದು ನೋಡಬೇಕಿದೆ. ಡಿಸಿಜಿಐ ಇಂದು ಅನುಮತಿ ನೀಡಿದಲ್ಲಿ ಹೊಸ ವರ್ಷದ ದಿನವೇ ಭಾರತದ ಕೊರೊನಾ ಲಸಿಕೆ ಪಡೆದಂತಾಗುತ್ತದೆ.
ಒಂದೆಡೆ ಬ್ರಿಟನ್ ಕೊರೊನಾ ವೈರಸ್ ಹಾಗೂ ಇನ್ನೊಂದೆಡೆ ಹಳೆ ಕೊರೊನಾ ವೈರಸ್ ನಡುವೆ ಜನ ನಲಗುತ್ತಿದ್ದು, ವ್ಯಾಕ್ಸಿನ್‍ಗೆ ಅನುಮತಿ ನೀಡಿದರೆ ಸಂಜೀವಿನಿ ಸಿಕ್ಕಂತಾಗುತ್ತದೆ. ಆದರೆ ಅಂತಿಮ ಹಂತದ ಅನುಮತಿ ಸಿಗಲಿದೆಯೇ ಕಾದು ನೋಡಬೇಕಿದೆ. ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ವ್ಯಾಕ್ಸಿನ್ ಹಂಚಿಕೆ ಕುರಿತು ಡ್ರೈ ರನ್ ನಡೆಸಲಾಗಿದ್ದು, ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ನಾಳೆ ಡ್ರೈ ರನ್ ನಡೆಯಲಿದೆ.