ಶಿವಮೊಗ್ಗ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಮಹಾಮಾರಿ ತೊಲಗಲಿ ಎಂದು ಪ್ರಾರ್ಥಿಸಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ 5 ಕಾಲಿನ ಗೋ ಮಾತೆಗೆ ಡಿಕೆಶಿ ಅಭಿಮಾನಿ ದೇವೇಂದ್ರಪ್ಪ ಎಂಬವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
5 ಕಾಲಿನ ವಿಶೇಷ 4 ಗೋವುಗಳಿಗೆ ರಾಯರ ಮಠದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ, ಕೊರೊನಾ ಮಹಾಮಾರಿ ತೊಲಗಿ ಜನತೆ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ಪ್ರಾರ್ಥಿಸಲಾಯಿತು. ಅಲ್ಲದೇ ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹುಟ್ಟು ಹಬ್ಬ ಹಿನ್ನೆಲೆ ರಾಯರ ಮಠದಲ್ಲಿ ಡಿಕೆಶಿ ಹೆಸರಿನಲ್ಲಿ ಅವರ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಗೋವುಗಳ ಮಾಲೀಕರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ಸಹ ವಿತರಿಸಿದರು.
ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಶಿವಮೊಗ್ಗ ಜಿಲ್ಲೆಗೂ ಮಹಾಮಾರಿ ವಕ್ಕರಿಸಿದೆ. ಈವರೆಗೆ ಜಿಲ್ಲೆಯಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ ಐದು ದಿನದ ಹಿಂದೆ ಗುಜರಾತ್‍ನ ಅಹಮದಾಬಾದ್‍ನಿಂದ ಜಿಲ್ಲೆಗೆ ಆಗಮಿಸಿದ್ದ 8 ಮಂದಿ ತಬ್ಲಿಘಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ಮುಂಬೈನಿಂದ ತೀರ್ಥಹಳ್ಳಿ ತಾಲೂಕಿನ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಮುಂಬೈನಿಂದ ಬಂದಿದ್ದ ವ್ಯಕ್ತಿಯನ್ನು ಹಾಸ್ಟೆಲ್‍ವೊಂದರಲ್ಲಿ ಕ್ವಾರಂಟೈನ್‍ಗೆ ಇಡಲಾಗಿತ್ತು. ಆದರೆ ಗುರುವಾರ ರಾತ್ರಿ ವ್ಯಕ್ತಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನಿಸಲಾಯಿತು. ಈ ವೇಳೆ ಆವರಿಗೆ ಕೊರೊನಾ ತಪಾಸಣೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.