ಹುಬ್ಬಳ್ಳಿ: ಜಿಲ್ಲೆಯ ಹೊರವಲಯದ ಗದಗ ರಿಂಗ್ ರೋಡ್‍ನಲ್ಲಿ ಎರಡು ಟಾಟಾ ಏಸ್ ವಾಹನಗಳ ಚಾಲಕರನ್ನು ಬೆದರಿಸಿ, ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಹುಬ್ಬಳ್ಳಿಯ ಗಂಗಾಧರ ನಗರದ ವಿಶಾಲ್ ಕಾಶಿನಾಥ ಬಿಜವಾಡ ಹಾಗೂ ಕರ್ಣ ಮುಂಡಗೋಡ ಎಂದು ಗುರುತಿಸಲಾಗಿದೆ. ಪಲ್ಸರ್ ಬೈಕಿನಲ್ಲಿ ನಿನ್ನೆ ಈ ಇಬ್ಬರು ಆರೋಪಿಗಳು ರಿಂಗ್ ರೋಡ್‍ನಲ್ಲಿ ಹೋಗುತ್ತಿದ್ದ ಕೃಷ್ಣಾ ಹಾಗೂ ಫಾರೂಕ್ ಎಂಬುವವರ ಟಾಟಾ ಏಸ್ ವಾಹನವನ್ನು ನಿಲ್ಲಿಸಿ, 38 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು
ಘಟನೆಯ ಬಳಿಕ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಐಟಿಸಿ ಗೋಡೌನ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯವನ್ನು ಪರಿಗಣಿಸಿ ಆರೋಪಿಗಳ ಜಾಡು ಹಿಡಿದಿದ್ದಾರೆ. ಹಳಿಯಾಳ ರಸ್ತೆಯಲ್ಲಿ ಪಾರ್ಟಿ ಮಾಡುತ್ತ ಕುಳಿತ ಸಮಯದಲ್ಲಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.